ತಾ.ಪಂ., ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮವಹಿಸಿ: ಕೊಡವೂರು
ಉಡುಪಿ, ಏ.13(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹತ್ತು ಬ್ಲಾಕ್ ಅಧ್ಯಕ್ಷರುಗಳು ಹಾಗೂ ನಾಯಕರ ಸಭೆಯು ಏ10 ರಂದು ಕಾರ್ತಿಕ್ ಹೋಟೆಲ್‍ನಲ್ಲಿ ಜರಗಿತು. ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಕಳೆದ ಗ್ರಾಮ ಪಂಚಾಯತ್ ಚುನಾವಣೆಯನ್ನು ಬ್ಲಾಕ್ ಅಧ್ಯಕ್ಷರು ಹಾಗೂ ನಾಯಕರು ಸಮರ್ಥವಾಗಿ ನಿಭಾಯಿಸಿದ್ದಾರೆ.
ಅದರಂತೆ ಮುಂಬರುವ ಜಿಲ್ಲಾ ಪಂಚಾಯತ್ / ತಾಲೂಕು ಪಂಚಾಯತ್ ಚುನಾವಣೆಗೆ ಮೂವತ್ತು ವೀಕ್ಷಕರನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ನೇಮಿಸಲಾಗುವುದು. ಇವರು ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಗ್ರಾಮೀಣ ಕಾಂಗ್ರೆಸ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆಯನ್ನು ನಡೆಸಿ, ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮವಹಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಕಳೆದ ಜನಧ್ವನಿ ಪಾದಯಾತ್ರೆಯು ಬಹಳ ಯಶಸ್ವಿಯಾಗಿ ನಡೆಯಿತು. ತದನಂತರ ಹಿರಿಯಡ್ಕದಿಂದ 80 ಬಡಗುಬೆಟ್ಟುವರೆಗೆ ಅಭೂತಪೂರ್ವ ಜನಧ್ವನಿ ಪಾದಯಾತ್ರೆಯು ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ಅನ್ನು ಕೇಂದ್ರೀಕರಿಸಿ ಅದರ ನಿರ್ದೇಶನದಂತೆ ಚುನಾವಣೆ ನಡೆಸಲಾಗುವುದು ಎಂದರು. ಮಾಜಿ ಶಾಸಕ ಗೋಪಾಲ ಪೂಜಾರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಬ್ಲಾಕ್ ಅಧ್ಯಕ್ಷರುಗಳಿಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ. ಸ್ಥಿರಾಸ್ಥಿ ಮತ್ತು ಕಟ್ಟಡ ಸಮಿತಿ ಸದಸ್ಯರಾದ ಪ್ರಸಾದ್‍ರಾಜ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಹರಿಪ್ರಸಾದ್ ಶೆಟ್ಟಿ, ದಿನಕರ್ ಹೇರೂರು, ಶಂಕರ್ ಕುಂದರ್, ನವೀನ್‍ಚಂದ್ರ ಸುವರ್ಣ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಸತೀಶ್ ಅಮೀನ್ ಪಡುಕೆರೆ, ಪ್ರದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಕುಶಲ್ ಶೆಟ್ಟಿ, ಕಾರ್ಯದರ್ಶಿ ಹಬೀಬ್ ಆಲಿ ಖಾದರ್ ಮೊದಲಾದವರು ಉಪಸ್ಥಿತರಿದ್ದರು.