ದುಬೈನಿಂದ ಹೊರಟು ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್- ಪ್ರಯಾಣಿಕರ ಪರದಾಟ
ಮಂಗಳೂರು, ಏ.13 : ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ದುಬೈ – ಮಂಗಳೂರು ವಿಮಾನವೂ ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಕೊಚ್ಚಿಯಲ್ಲಿ ಇಳಿದ ಘಟನೆ ನಡೆದಿದೆ. ಈ ಬಗ್ಗೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈ – ಮಂಗಳೂರು ಏರ್ ಇಂಡಿಯಾ ವಿಮಾನವೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು, ಆದರೆ ಮಂಗಳೂರಿನಲ್ಲಿ ವಿಮಾನ ಇಳಿಯಲು ಅನುಕೂಲಕರ ವಾತಾವರಣ ಇಲ್ಲದ ಕಾರಣ, ವಿಮಾನದ ಮಾರ್ಗಬದಲಿಸಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ 118ಮಂದಿ ಪ್ರಯಾಣಿಕರಿದ್ದು, ರಾತ್ರಿ 12.30 ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಭಾರೀ ಸಿಡಿಲು ಮಳೆಯ ಕಾರಣ ವಿಮಾನ ಇಳಿಯಲಾಗದೆ ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ. ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಮೋಡ ಮುಸುಕಿದ ಹಾಗೂ ಮಳೆಯ ವಾತಾವರಣವಿದ್ದು, ಸೋಮವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿ ತೇವಾಂಶಭರಿತ ಮೋಡಗಳು ಸೃಷ್ಟಿಯಾಗಿದ್ದು ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಏ.13ರಿಂದ ಏ.17ರವರೆಗೆ ಭಾರಿ ಮಳೆಯಾಗುವ ಸಂಭವವಿದ್ದು , ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.