ಭಾರತದ 50 ಸೈನಿಕರ ಮೇಲೆ ಚೀನಾದ 300 ಸೈನಿಕರಿಂದ ದಾಳಿ
ನವದೆಹಲಿ: ಭಾರತದ ಭೂಪ್ರದೇಶದಲ್ಲಿ ಗಾಲ್ವನ್ ನದಿ ಸಮೀಪ ಚೀನಾ ನಿರ್ಮಿಸಿದ್ದ ಬಂಕರ್ ತೆರವಿಗೆ ಸಂಬಂಧಿಸಿದ ವಿವಾದವು ಸೋಮವಾರ ರಾತ್ರಿ ಹಿಂಸಾತ್ಮಕ ಬಡಿದಾಟಕ್ಕೆ ಕಾರಣವಾಗಿದೆ. ಭಾರತದ 50 ಸೈನಿಕರ ಮೇಲೆ ಚೀನಾ ಸೇನೆಯ 300 ಸೈನಿಕರು ಮುಗಿಬಿದ್ದು ಈ ದಾಳಿ ನಡೆಸಿದ್ದಾರೆ. ಈ ಬಡಿದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ನಾಲ್ವರು ಸೈನಿಕರಿಗೆ ತೀವ್ರ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಆದರೆ, ತಮ್ಮ ಕಡೆ ಆಗಿರುವ ಪ್ರಾಣಹಾನಿ ಮತ್ತು ಗಾಯಾಳುಗಳ ಬಗ್ಗೆ ಚೀನಾ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ‘ಚೀನಾದ 43 ಸೈನಿಕರು ಬಡಿದಾಟದಲ್ಲಿ ಮೃತಪಟ್ಟಿದ್ದಾರೆ’ ಎಂದು ಸುದ್ದಿಸಂಸ್ಥೆ ಎಎನ್‌ಐ ಮಂಗಳವಾರ ವರದಿ ಪ್ರಕಟಿಸಿತ್ತು. ಬುಧವಾರ ಆ ವರದಿಯನ್ನು ಮಾರ್ಪಡಿಸಿದೆ. ‘ಚೀನಾ ಕಡೆಯೂ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಚೀನಾ ಸೇನೆಯ ಕಮಾಂಡರ್ ಒಬ್ಬರು, ಭಾರತೀಯ ಸೈನಿಕರ ಕೈಯಲ್ಲಿ ಹತರಾಗಿದ್ದಾರೆ’ ಎಂಬ ಮಾಹಿತಿ ಮಾರ್ಪಡಿಸಿದ ವರದಿಯಲ್ಲಿ ಇದೆ. ಸೋಮವಾರ ರಾತ್ರಿ ನಡೆದಿದ್ದು ಏನು? ‘ಎಲ್‌ಎಸಿಯಿಂದ ಒಳಗೆ ಭಾರತದ ಗಡಿಯಲ್ಲಿ, ಗಾಲ್ವನ್ ನದಿ ದಂಡೆಯಲ್ಲಿ ಚೀನಾ ಸೈನಿಕರು ಗಸ್ತುಠಾಣೆ ನಿರ್ಮಿಸಿದ್ದರು. ಗಾಲ್ವನ್ ನದಿಯ ಗಸ್ತು ಪಾಯಿಂಟ್ 14ರಲ್ಲಿ ಈ ಠಾಣೆ ಇತ್ತು (ಪಿಪಿ 14). ಒಮ್ಮತದ ಪ್ರಕಾರ ಈ ಠಾಣೆಯನ್ನು ತೆರವು ಮಾಡಬೇಕಿತ್ತು. ಆದರೆ, ಸೋಮವಾರವೂ ಅದನ್ನು ತೆರವು ಮಾಡಿರಲಿಲ್ಲ. ಸೋಮವಾರ ಸಂಜೆ ವೇಳೆಗೆ ಕರ್ನಲ್ ಸಂತೋಷ್ ಬಾಬು ನೇತೃತ್ವದ ತಂಡವು ಚೀನಾ ಗಸ್ತು ಠಾಣೆ ಇದ್ದ ಸ್ಥಳಕ್ಕೆ ತೆರಳಿ, ಅದನ್ನು ತೆರವು ಮಾಡುವಂತೆ ಸೂಚಿಸಿತು. ಆಗ ಚೀನಾ ಸೈನಿಕರು ತಮ್ಮ ಗಡಿಯತ್ತ ವಾಪಸ್ ಆಗಿದ್ದರು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಂತರ ಸಂತೋಷ್ ಅವರು ಹೆಚ್ಚಿನ ಸೈನಿಕರನ್ನು ಕರೆಸಿಕೊಂಡು, ಗಸ್ತುಠಾಣೆಯನ್ನು ತೆರವು ಮಾಡಲು ಸಿದ್ಧತೆ ನಡೆಸಿದ್ದರು. ಆಗ ಚೀನಾ ಸೈನಿಕರು ಭಾರಿ ಸಂಖ್ಯೆಯಲ್ಲಿ ಹಿಂತಿರುಗಿದರು. ರಕ್ಷಾ ಕವಚಗಳನ್ನು ಧರಿಸಿದ್ದ ಚೀನಾ ಸೈನಿಕರು, ಮೊಳೆ ಹೊಡೆಯಲಾದ ದೊಣ್ಣೆಗಳು, ಕಬ್ಬಿಣದ ಸರಳುಗಳನ್ನು ಹಿಡಿದಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಭಾರತದ ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿದರು ಎಂದು ಅವರು ವಿವರಿಸಿದ್ದಾರೆ. ದಾಳಿ ತಡೆಯಲು ಮುಂದಾದ ಕರ್ನಲ್ ಸಂತೋಷ್ ಬಾಬು ಮತ್ತು ಇನ್ನೂ ಇಬ್ಬರು ಸೈನಿಕರಿಗೆ ಮಾರಣಾಂತಿಕ ಗಾಯಗಳಾದವು. ಘರ್ಷಣೆ ಮತ್ತಷ್ಟು ಕಾಲ ಮುಂದುವರಿಯಿತು. ಚೀನಾ ಸೈನಿಕರು ಭಾರತದ ಉಳಿದ ಸೈನಿಕರನ್ನು ಸೆರೆಹಿಡಿದು ಒತ್ತೆಯಲ್ಲಿ ಇರಿಸಿಕೊಂಡಿದ್ದರು. ಅಷ್ಟರಲ್ಲಿ ಭಾರತದ ಮತ್ತಷ್ಟು ಸೈನಿಕರು ಸಂಘರ್ಷದ ಸ್ಥಳ ತಲುಪಿದರು. ಆಗ ಮತ್ತೆ ಬಡಿದಾಟ ಆರಂಭವಾಯಿತು. ಬಡಿದಾಟ ಸುಮಾರು ನಾಲ್ಕು ತಾಸು ನಡೆಯಿತು ಎಂದು ಅವರು ವಿವರಿಸಿದ್ದಾರೆ. ನದಿಯ ದಂಡೆಯಲ್ಲಿಯೇ ಬಡಿದಾಟ ನಡೆಯುತ್ತಿತ್ತು. ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು. ನೀರಿನ ಸೆಳೆತಕ್ಕೆ ಬಡಿದಾಟ ನಡೆಯುತ್ತಿದ್ದ ಭೂಭಾಗ ಕುಸಿಯಿತು. ಎರಡೂ ಕಡೆಯ ಸೈನಿಕರು ನೀರಿಗೆ ಬಿದ್ದರು. ಕೆಲವರು ಕೊಚ್ಚಿಹೋದರು. ಉಷ್ಣಾಂಶ ತೀರಾ ಕಡಿಮೆ ಇದ್ದ ಕಾರಣ ಹಲವರು ಮೃತಪಟ್ಟರು. ನೀರಿನಲ್ಲಿ ಮೃತಪಟ್ಟವರ ದೇಹಗಳನ್ನೂ ಹೊರತೆಗೆಯಲಾಯಿತು ಎಂದು ಅವರು ವಿವರಿಸಿದ್ದಾರೆ. |