ಮಣ್ಣಪಳ್ಳ ಅಭಿವೃದ್ಧಿಗೆ 165 ಕೋ.ರೂ. ವೆಚ್ಚದ ಯೋಜನೆ ಸಿದ್ದ: ರಘುಪತಿ ಭಟ್

ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ಉಡುಪಿ ಬೀಡಿನಗುಡ್ಡೆಯ ಮೈದಾನ ಹಾಗೂ ಮಣಿಪಾಲದ ಮಣ್ಣಪಳ್ಳದ ಅಭಿವೃದ್ಧಿ ಸಮಿತಿಯು ನಗರ ಸಭೆಯ ನೇತೃತ್ವದಲ್ಲಿ ಇರಬೇಕು ಎಂದು ಇಂದು ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಂದು ನಗರಸಭಾ ಅಧ್ಯಕ್ಷೆ ಸುಮಿತ್ರ ಆರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಡುಪಿಯ ಬೀಡಿನ ಗುಡ್ಡೆ ಕ್ರೀಡಾಂಗಣದ  ಶುಲ್ಕ ಪರಿಷ್ಕರಣೆ ಕುರಿತಾಗಿ ಚರ್ಚೆಗಳು ನಡೆದಿದ್ದು, ಈ ವೇಳೆ  ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರದ ಬೀಡಿನಗುಡ್ಡೆ, ಮಣಿಪಾಲದ ಮಣ್ಣಪಲ್ಲದ ಅಭಿವೃದ್ಧಿ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವುದಕ್ಕೆ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಸದಸ್ಯ ರಮೇಶ್ ಕಾಂಚನ್ ಇದನ್ನು ನಗರ ಸಭೆಯ ನಿರ್ಣಯದಂತೆ ಅಭಿವೃದ್ಧಿಗೊಳಿಸಬೇಕು ಎಂದರು.

ಬೀಡಿನಗುಡ್ಡೆ ಕ್ರೀಡಾಂಗಣ ಮತ್ತು ಮಣ್ಣ ಪಳ್ಳದ ನಿರ್ವಹಣೆ ಸಮಿತಿ ನಗರ ಸಭೆಗೆಯ ನೇತೃತ್ವದಲ್ಲಿ ಇರುವಂತೆ ಆಗಬೇಕು ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಈ ಎರಡು ಅಭಿವೃದ್ಧಿ ಸಮಿತಿಗೆ ನಗರಸಭೆಯ ನಿರ್ಣಯವೇ ಅಂತಿಮ ಎಂಬ ನಿರ್ಧಾರಕ್ಕೆ ಬರಲಾಯಿತು. ಬೀಡಿನಗುಡ್ಡೆ ಮೈದಾನ ಮತ್ತು ಮಣ್ಣಪಳ್ಳದ ಅಭಿವೃದ್ಧಿ ಕುರಿತಾದ ಯೋಜನೆಗಳ ಟೆಂಡರ್ ನಗರ ಸಭೆಯಲ್ಲಿ ನಡೆಯುತ್ತದೆ. ಆದ್ದರಿಂದ ಇದರ ಅಭಿವೃದ್ಧಿ ಸಮಿತಿಯು ನಗರ ಸಭೆಯ ನೇತೃತ್ವದಲ್ಲಿ ಇದ್ದರೆ ಇದರಿಂದ ನಗರ ಸಭೆಗೆ ಆದಾಯ ಪಡೆಯಬಹುದು ಎಂದರು.

ಇನ್ನು ಮಣ್ಣಪಳ್ಳ ಅಭಿವೃದ್ಧಿಗೆ ಸಂಬಂಧಿಸಿ ಮಹತ್ವಾಕಾಂಕ್ಷೆ 165 ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ದ ಪಡಿಸಲಾಗಿದ್ದು,ಇದು ಉಪ್ಪು ನೀರನ್ನು ತಡೆಯುವ ಸಲುವಾಗಿ ಕಲ್ಯಾಣ ಪುರ, ಶಿಂಬ್ರಾ  ಹಾಗೂ ಕೀಳಿಂಜೆಯಲ್ಲಿ ಅಣೆಕಟ್ಟು ಕಟ್ಟಿ ಎಪ್ರಿಲ್ ಮೇ ವರೆಗೆ ನೀರು ಇರುವಂತೆ ಮಾಡಿ ಈ ಭಾಗದಲ್ಲಿ ಅಂತರ್ಜಲ ವ್ರದ್ದಿಸುವ ಯೋಜನೆಯಾಗಿದೆ.

ಈ ಯೋಜನೆಗೆ ಸಂಬಂಧಿಸಿ ಕೇಂದ್ರ ಬೋರ್ಡ್‍ನಲ್ಲಿ ಅನುಮೋದನೆ ಸಿಕ್ಕಿದ್ದು, ಹಣಕಾಸು ಮಂಜೂರು ಆಗಬೇಕಿದೆ. ಈ ಯೋಜನೆಯಿಂದ ಮಣ್ಣ ಪಳ್ಳದ ಎಪ್ರೀಲ್ ಮೇ ಯಲ್ಲೂ ನೀರು ಸಿಗುವ ಮೂಲಕ ಇಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ.

ಇನ್ನು ಇದೇ ವೇಳೆ ಪೆರಂಪಳ್ಳಿ ಭಾಗದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವ ಕುರಿತು ಸಭೆಯಲ್ಲಿ ಸೆಲಿನಾ ಕರ್ಕಡ ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಕೆಲ ದಿನಗಳಿಂದ ನೀರು ಪೂರೈಕೆ ಆಗುತ್ತಿಲ್ಲ. ಈ ಕುರಿತಾಗಿ ಸ್ಥಳೀಯರು ಧರಣಿ ನಡೆಸುವುದಾಗಿ ತಿಳಿಸಿದರು. ಈ ವಿಚಾರವಾಗಿ ನಗರ ಸಭೆಯ ಅಧ್ಯಕ್ಷರು ವಾರಾಹಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇನ್ನು 76ಬಡಗುಬೆಟ್ಟು ಪರಿಸರದಲ್ಲಿ ಎರಡು ಕಾಮಗಾರಿ ನಡೆಯುತ್ತಿದ್ದು ಈ ಪೈಕಿ 10 ಲಕ್ಷ ಮೊತ್ತದ ಒಂದು ಕಾಮಗಾರಿ ನನ್ನ ಗಮನಕ್ಕೆ ಬಾರದೇ ನಡೆದಿದೆ ಎಂದು ಕೌನ್ಸಿಲರ್ ವಿಜಯ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಸದ್ಯ ನನ್ನ ಗಮನಕ್ಕೆ ಬಾರದೇ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಗತ್ಯತೆ ಇಲ್ಲ ಎಂದು ನಿವಾಸಿಗಳು ತಿಳಿಸುತ್ತಾರೆ. ಹೀಗಿರುವಾಗ ಅಗತ್ಯ ಇರುವ ಕಡೆ ಕಾಮಗಾರಿ ಮಾಡದೆ ಅನಗತ್ಯವಾಗಿ ನಡೆಯುತ್ತಿರುವ ಕಾಮಗಾರಿಯ ಅನುದಾನವನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ರಾಜ್ಯ ಮಟ್ಟದ ಸೇನಾ ನೇಮಕಾತಿಯಲ್ಲಿ ಆಗಮಿಸಿದ ಅಭ್ಯರ್ಥಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ಕೊಡದಿರುವುದು ನಗರಸಭೆಯ ವೈಫಲ್ಯ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ ಎಂದು ಅಮೃತಾ ಕೃಷ್ಣಮೂರ್ತಿ ಆಚಾರ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ನಗರದಲ್ಲಿ ನಿವೇಶನ ರಹಿತರ ನಿವೇಶನ ಹಂಚುವ ಪ್ರಕ್ರಿಯೆ ಬಗ್ಗೆ ಸಭೆಯ ಗಮನ ಸೆಳೆದರು. ಇನ್ನು ಧಾರ್ಮಿಕ ಕಾರ್ಯಕ್ರಮಗಳ ಫ್ಲೆಕ್ಸ್ ‌‌ಗಳಿಗೆ ರಿಯಾಯಿತಿ ದರ ಮಾಡಿ ಎಂದು ಯೋಗೀಶ್‌ ಸಾಲ್ಯಾನ್ ಸಭೆಯಲ್ಲಿ ಹೇಳಿದರು.

ಆದಿ ಉಡುಪಿಯಲ್ಲಿರುವ ಮಾಂಸದ ಅಂಗಡಿಯಲ್ಲಿ ವದಾಗ್ರಹ ಇಲ್ಲ. ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸರಿಯಾದ ವ್ಯವಸ್ಥೆ ಕೂಡ ಇಲ್ಲ. ಪ್ರಾಣಿಗಳ ರಕ್ತವು ಚರಂಡಿಯಲ್ಲೇ ಹರಿಯುತ್ತದೆ. ಆದಿ ಉಡುಪಿಯ ಸುತ್ತಲೂ ಕೆಟ್ಟವಾಸನೆ ಹರಡುತ್ತಿದೆ. ನಗರಸಭೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸುಂದರ್ ಜೆ ಕಲ್ಮಾಡಿಯವರು ಒತ್ತಾಯಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭಟ್ ಕರ್ವಾಲಿನಲ್ಲಿ ಪ್ರಾಣಿ ವದಾಗ್ರಹ ಮಾಡಿ ಎಂದು ಸಲಹೆ ನೀಡಿದರು.

ಈ ಸಂದರ್ಭ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಯುಕ್ತ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!