ಮುರಾರಿ ಸಮುದಾಯದ ಜನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು: ಜಯಪ್ರಕಾಶ್ ಹೆಗ್ಡೆ

ಮಂಗಳೂರು,ಎ.12: ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಈ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಮುರಾರಿ ಸಮುದಾಯದವರು ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ. ಟಿ. ಸುವರ್ಣ, ಪುತ್ತೂರಿನ ಪ್ರಸಿದ್ದ ವೈದ್ಯರಾದ ಪ್ರಸಾದ್ ಭಂಡಾರಿ ಹಾಗೂ ಮುರಾರಿ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಮನವಿಯಲ್ಲಿ ಮುರಾರಿ ಜಾತಿಗೆ ಸೇರಿದ ಜನಾಂಗದವರು 4 ತಲೆಮಾರಿನ ಹಿಂದೆ ಕೇರಳದಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿರುತ್ತಾರೆ.  ಪುತ್ತೂರು ತಾಲೂಕಿನ ಈಶ್ವರ ಮಂಗಲ, ಸುಳ್ಯ, ಕಡಬ ತಾಲೂಕಿನ ನೆಲ್ಯಾಡಿ, ಮಡಿಕೇರಿ ಹಾಗೂ ಮೈಸೂರಿನಲ್ಲಿ ಸದರಿ ಜಾತಿಗೆ ಸೇರಿದ ಸುಮಾರು 1,500 ಜನರು ನೆಲೆಸಿರುತ್ತಾರೆ.

ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ ತೀರಾ ಹಿಂದುಳಿದವರಾಗಿದ್ದು, ಅವರುಗಳು ಕುಲ ಕಸುಬಾಗಿ ಮಣ್ಣಿನ ಕುಸುರಿ, ಬುಟ್ಟಿ ಹೆಣೆಯುವುದನ್ನು ಅಳವಡಿಸಿಕೊಂಡಿರುವುದಲ್ಲದೇ  ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೂಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಈ ಜನಾಂಗದವರ ಮಾತೃ ಭಾಷೆ ಮಲಯಾಳಂ ಆಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!