ಕೊರೋನಾ 2ನೇ ಅಲೆಯ ನಿರ್ಲಕ್ಷ್ಯ ಬೇಡ- ಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಿ-ಉಡುಪಿ ಡಿಸಿ
ಉಡುಪಿ ಏ.12(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವ ಮೂಲಕ ಜಾಗರೂಕರಾಗಿರುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ ವೇಗವಾಗಿ ಕೊರೋನಾ 2ನೇ ಅಲೆ ಹರಡುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತುಂಬಾ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಕೊರೋನಾ ತಡೆಗಟ್ಟುವ ಸಲುವಾಗಿ ಬೇಕಾದ ಪೂರಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದ್ದು, ಈ ಅವಧಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಕೋವಿಡ್ ಹರಡುವಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.
ಸದ್ಯ ಜಿಲ್ಲೆಯ ಪರಿಸ್ಥಿತಿ ಈಗಲೂ ಕೈಮೀರಿಲ್ಲ. ಹಾಗಾಗಿ ಸಾಮೂಹಿಕವಾಗಿ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸದಂತೆ ಮನವಿ ಮಾಡಿಕೊಂಡರು. ಒಂದು ವೇಳೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅತ್ಯಂತ ಜಾಗರೂಕತೆಯಿಂದ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಲ್ಗೊಳ್ಳುವುದು ಉತ್ತಮವಾಗಿದೆ. ಅಲ್ಲದೆ ಹೆಚ್ಚು ಜನ ಭಾಗವಹಿಸುವ ಯಾವುದೇ ಕಾರ್ಯಕ್ರಮಗಳನ್ನು ಅಯೋಜಿಸಲು ಹೋಗಬೇಡಿ ಹಾಗೂ ಆಯೋಜನೆ ಮಾಡಿದ್ದರೂ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವುದು ಉತ್ತಮ ಎಂದು ಸಲಹೆ ನೀಡಿದರು.
ಇದರ ಜೊತೆಗೆ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಹಾಕಿ ಎಂದು ಮನವಿ ಮಾಡಿಕೊಂಡ ಅವರು, ಹಿರಿಯರಿಗೆ ಲಸಿಕೆ ಹಾಕಿಸುವುದರಲ್ಲಿ ಬಹಳಷ್ಟು ಜನ ಹಿಂದೆ ಬೀಳುತ್ತಿದ್ದೀರಾ. ಲಸಿಕೆಯನ್ನು ಹಾಕುವುದರಿಂದ ಕೊರೋನಾದ ಆತಂಕ ಸಾಕಷ್ಟು ಕಡಿಮೆ ಮಾಡಬಹುದಾಗಿದೆ. ಕಳೆದ ಬಾರಿ ಕೋವಿಡ್ ನಿಂದ 192 ಮಂದಿಯನ್ನು ನಾವು ಕಳೆದುಕೊಂಡಿದ್ದೇವೆ. ಈ 2ನೇ ಅಲೆಯಲ್ಲೂ ನಮ್ಮ ಹಿರಿಯರನ್ನು ಕಳೆದು ಕೊಳ್ಳುವ ಪರಿಸ್ಥಿತಿ ಬರುವುದು ಬೇಡ. ಕಳೆದ ಬಾರಿ ವೆಂಟಿಲೇಟರ್, ಬೆಡ್ ಗಳು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ನಾವು ನಿರ್ಲಕ್ಷ್ಯ ವಹಿಸಿದರೆ ಮುಂದೆ ಇಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗ ಬಹುದು. ಹಾಗಾಗಿ ಹಿರಿಯರನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆದ್ದು, ಕೊರೋನಾ ಕುರಿತು ಎಚ್ಚರ ವಹಿಸಿ, ಹಿರಿಯರಿಗೆ ತಪ್ಪದೇ ಲಸಿಕೆಯನ್ನು ಹಾಕಿಸಿ ಎಂದು ಜಿಲ್ಲೆಯ ಜನತೆಗೆ ಮನವಿ ಮಾಡಿಕೊಂಡರು.