ಬೆಂಗಳೂರು ರಾತ್ರಿ ಕಫ್ರ್ಯೂ ಸಮಯ ಬದಲಾವಣೆ – ಹೊಟೇಲ್ ಸಂಘದ ಮನವಿ ತಿರಸ್ಕಾರ: ಡಾ.ಕೆ ಸುಧಾಕರ್

ಬೆಂಗಳೂರು ಏ.12: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿಧಿಸಿರುವ ನಗರದಲ್ಲಿನ ರಾತ್ರಿ ಕಫ್ರ್ಯೂ ಸಮಯ ಬದಲಾವಣೆ ಸಲುವಾಗಿ ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಸಲ್ಲಿಸಿರುವ ಮನವಿಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಜಾರಿಯಲ್ಲಿರುವ ಕೋವಿಡ್ ರಾತ್ರಿ ಕಫ್ರ್ಯೂ ಸಮಯ ಬದಲಾವಣೆ ಮಾಡುವ ಸಲುವಾಗಿ ಇಂದು ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರನ್ನು ಇಂದು ಭೇಟಿ ಮಾಡಿ ಚರ್ಚೆ ನಡೆಸಿದರು.

ಈ ವೇಳೆ ಕೋವಿಡ್ ರಾತ್ರಿ ಕಫ್ರ್ಯೂನ್ನು ತಮಿಳುನಾಡು ಮಾದರಿಯಂತೆ  ರಾತ್ರಿ ಹತ್ತು ಗಂಟೆ ಬದಲಿಗೆ ಹನ್ನೊಂದು ಗಂಟೆಯವರೆಗೆ ವಿಸ್ತರಿಸುವಂತೆ ಒತ್ತಾಯಿಸಿದರು. ರಾತ್ರಿಯ ವೇಳೆ ಊಟಕ್ಕಾಗಿ ಹೆಚ್ಚು ಜನರು ಹೋಟೆಲ್‍ಗೆ ಬರುತ್ತಾರೆ ಆದ್ದರಿಂದ ರಾತ್ರಿ ಹತ್ತು ಗಂಟೆಗೆ ಹೊಟೇಲ್ ಗಳ ಬಾಗಿಲು ಮುಚ್ಚುವುದು ಕಷ್ಟವಾಗಲಿದೆ. ಅಲ್ಲದೆ ಹತ್ತು ಗಂಟೆಯೊಳಗೆ ಹೊಟೇಲ್ ಕಾರ್ಮಿಕರು ತಮ್ಮ ಮನೆಗಳಿಗೆ ಹೋಗಲು ಕಷ್ಟವಾಗುತ್ತದೆ. ಆದ್ದರಿಂದ ಕಫ್ರ್ಯೂ ಸಮಯವನ್ನು ಹನ್ನೊಂದು ಗಂಟೆಗೆ ವಿಸ್ತರಿಸಿ ಬೆಳಗ್ಗೆ ಆರು ಗಂಟೆಯವರೆಗೂ ಮಾಡಿ ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಸಂಘದ ಮನವಿಯನ್ನು ನಿರಾಕರಿಸಿರುವ ಸಚಿವರು ಪ್ರತಿಕ್ರಿಯೆ ನೀಡಿ, ರಾತ್ರಿ ಕಫ್ರ್ಯೂ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈಗಿರುವ ಸಮಯ ಬದಲಾವಣೆ ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಕೋವಿಡ್ ಇನ್ನೂ ಹೆಚ್ಚಾಗುವ ಆತಂಕವಿದೆ. ಆದ್ದರಿಂದ ಇದರ ನಿಯಂತ್ರಣ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಭೆಯ  ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಹೊಟೇಲ್ ಉಪಹಾರ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಅವರು  ಕಳೆದ ವರ್ಷ ಲಾಕ್ ಡೌನ್ ಆದ ಬಳಿಕ ಮುಚ್ಚಿರುವ ಬಹುತೇಕ ಹೊಟೇಲ್ ಪುನಃ ಆರಂಭವಾಗಿಲ್ಲ. ಆದ್ದರಿಂದ ಮತ್ತೆ ಲಾಕ್ ಡೌನ್ ಆದರೆ ಕಷ್ಟ. ಹೀಗಾಗಿ ಲಾಕ್ ಡೌನ್ ಮಾಡಬೇಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!