ಉಡುಪಿ: ಮತ್ತೆ 5 ಕೊರೋನಾ ಪಾಸಿಟಿವ್ ಸೋಂಕು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 5ಕೊರೋನಾ ಪಾಸಿಟಿವ್ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ವೈರಸ್ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ 25, 24 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕನಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಗೊಂಡಿದೆ. ಚಿತ್ರದುರ್ಗದ 17 ವರ್ಷದ ಯುವತಿ ಮಣಿಪಾಲ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬಂದಾಗ ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಮಂಡ್ಯಕ್ಕೆ ಮಹಾ ಕಂಟಕ ಎದುರಾಗಿದ್ದು ಬರೋಬ್ಬರಿ 62 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ದಾಖಲೆ 127 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.
ಮಂಡ್ಯದಲ್ಲಿ ಇಂದು ಒಂದೇ ದಿನ 62 ಮಂದಿಗೆ ಸೋಂಕು ತಗುಲಿದೆ. ಇನ್ನು ದಾವಣಗೆರೆಯಲ್ಲಿ 19, ಶಿವಮೊಗ್ಗ 12, ಕಲಬುರಗಿ 11, ಬೆಂಗಳೂರು 5, ಉಡುಪಿ 4, ಉತ್ತರ ಕನ್ನಡ 4, ಹಾಸನ 3, ಚಿಕ್ಕಮಗಳೂರು 2, ಗದಗ, ಯಾದಗಿರಿ, ವಿಜಯಪುರ ಮತ್ತು ಚಿತ್ರದುರ್ಗ 1 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 127 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇನ್ನು ಬೆಂಗಳೂರಿನಲ್ಲಿ ಕೊರೋನಾಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
1373 ಪ್ರಕರಣಗಳ ಪೈಕಿ 530 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 802 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ರಾಜ್ಯದಲ್ಲಿ ಒಟ್ಟಾರೆ 40 ಮಂದಿ ಬಲಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ 127 ಪ್ರಕರಣಗಳ ಪೈಕಿ 91 ಪ್ರಕರಣಗಳಿಗೆ ಮಹಾರಾಷ್ಟ್ರದ ಮುಂಬೈ ನಂಟಿದೆ.