ಜನರು ಸಹಕರಿಸದಿದ್ದರೆ ಲಾಕ್ ಡೌನ್ ಅನಿವಾರ್ಯ: ಸಿಎಂ ಯಡಿಯೂರಪ್ಪ
ಬೀದರ್: ಲಾಕ್ ಡೌನ್ ಮಾಡಬಾರದು ಎಂದಾದರೆ ಜನರು ಅದಕ್ಕೆ ಸರಿಯಾದ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೀದರ್ ನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು, ಜನಜಂಗುಳಿ ಸೇರಬಾರದು, ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದರು.
ಸರ್ಕಾರ ಪದೇ ಪದೇ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಅರಿವು ಮೂಡಿಸುತ್ತಿದೆ. ಕೊರೋನಾ ಅಧಿಕವಾಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮಾಡಲಾಗಿದೆ. ಅದಕ್ಕೆ ಜನರು ಸ್ಪಂದಿಸಬೇಕು, ಇಲ್ಲದಿದ್ದರೆ ಬಿಗಿಯಾದ ಕ್ರಮವನ್ನು ಸರ್ಕಾರ ಕ್ರಮ ಕೈಗೊಳ್ಳ ಬೇಕಾಗುತ್ತದೆ. ಲಾಕ್ ಡೌನ್ ಅನಿವಾರ್ಯವಾಗಿ ಮಾಡಬೇಕಾಗುತ್ತದೆ, ಅದಕ್ಕೆ ಆಸ್ಪದ ಕೊಡಬೇಡಿ ಎಂದು ಮುಖ್ಯಮಂತ್ರಿ ಮನವಿ ಮಾಡಿಕೊಂಡರು.
ಕೊರೊನಾ ನಿಯಂತ್ರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ನಡೆಸಲಾಗಿದೆ. ಹೆಚ್ಚು ಪ್ರಕರಣಗಳಿರುವ ಕಡೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಸಹ ಸರ್ಕಾರದ ಕ್ರಮಗಳಿಗೆ ಸಹಕರಿಸಬೇಕು ಎಂದು ಸಹ ಮನವಿ ಮಾಡಿಕೊಂಡರು.
ಮತ್ತೆ ಲಾಕ್ ಡೌನ್ ಬೇಡ: ಜನರು ಬದುಕಲು ಜಾಗೃತರಾಗಬೇಕು, ಜೀವ ಉಳಿಸಿಕೊಳ್ಳಲು ಸರ್ಕಾರದ ನಿಯಮ ಪಾಲಿಸಬೇಕು, ಮೊಂಡುತನ ಬೇಡ, ಮತ್ತೆ ಲಾಕ್ ಡೌನ್ ಆದರೆ ಜನರಿಗೆ ಕಷ್ಟವಾಗುತ್ತದೆ ಎಂದು ನಟ ಶಿವರಾಜ್ ಕುಮಾರ್ ಡಾ ರಾಜ್ ಕುಮಾರ್ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೊದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಇದೀಗ ಎಲ್ಲೆಡೆ ಮತ್ತೆ ಸರ್ಕಾರ ಲಾಕ್ ಡೌನ್ ಹೇರಿಕೆ ಮಾಡುತ್ತದೆಯೇ ಎಂಬ ಚರ್ಚೆ, ಮಾತುಗಳು ಕೇಳಿಬರುತ್ತಿದೆ. ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಾಗಿ ಜನ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿದ್ದರು. ಈಗಷ್ಟೇ ಪರಿಸ್ಥಿತಿ ಸಹಜತೆಗೆ ಬರುತ್ತಿರುವಾಗ ಮತ್ತೆ ಲಾಕ್ ಡೌನ್ ಹೇರಿಕೆಯಾದರೆ ಸಾಮಾನ್ಯ ಜನತೆ ಪಾಡು ಮೂರಾಬಟ್ಟೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ.