ಉಡುಪಿ: ಬಿಜೆಪಿ ಪ್ರ.ಕಾರ್ಯದರ್ಶಿ ಸದಾನಂದ ಮೇಲಿದ್ದ ಚೆಕ್ ಬೌನ್ಸ್ ಪ್ರಕರಣ ಹಿಂಪಡೆಯಲು ನಿರ್ಧಾರ
ಬೈಂದೂರು: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಶುಕ್ರವಾರ ಕೊಲ್ಲೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ವಿರುದ್ಧ ಮಾಡಿದ ಬೆದರಿಕೆ ಹಾಗೂ ಮಾನಸಿಕ ಹಿಂಸೆ ಆರೋಪಗಳು ಮತ್ತು ಅವುಗಳಿಗೆ ಸುಕುಮಾರ ಶೆಟ್ಟಿ ನೀಡಿದ ವಾಸ್ತವ ಅಂಶ ಆಧಾರಿತ ಸ್ಪಷ್ಟನೆಯ ಹಿನ್ನೆಲೆಯಲ್ಲಿ ಪಕ್ಷ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗೊಂದಲ ಏರ್ಪಟ್ಟಿದೆ. ಈ ಪ್ರಕರಣವನ್ನು ವಿರೋಧ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ತೊಡಗಿವೆ. ಈ ಕಾರಣದಿಂದ ಅವರ ವಿರುದ್ಧ ದಾಖಲಿಸಿರುವ ಚೆಕ್ ಬೌನ್ಸ್ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಶಾಸಕರು ನಿರ್ಧರಿಸಿದ್ದಾರೆ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ತಿಳಿಸಿದರು.
ಭಾನುವಾರ ಇಲ್ಲಿನ ಪಕ್ಷ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ದೀಪಕ್, ಬಿಜೆಪಿ ಶಿಸ್ತಿನ ಪಕ್ಷ. ಅದರಲ್ಲಿ ಹಿರಿಯರು, ಕಿರಿಯರು ಒಂದು ಕುಟುಂಬದ ಸದಸ್ಯರಿದ್ದಂತೆ. ಒಂದು ಕೆಟ್ಟ ಘಳಿಗೆಯಲ್ಲಿ ಈ ಬೆಳವಣಿಗೆ ಆಗಿದೆ. ಇದನ್ನು ಮುಂದುವರಿಸಬಾರದೆಂದು ಪಕ್ಷದ ಜಿಲ್ಲಾ ವರಿಷ್ಠರೂ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು. ಪ್ರಕರಣ ಈಗ ಮುಗಿದ ಅಧ್ಯಾಯ. ಇದರ ಕುರಿತು ಮಂಡಲ ಪದಾಧಿಕಾರಿಗಳು ವರಿಷ್ಠರ ಅನುಮತಿ ಇಲ್ಲದೆ ಹೇಳಿಕೆಗಳನ್ನು ನೀಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡ ಬಾರದು. ಇದೆ ರೀತಿ ಮುಂದುವವರಿದರೆ ಪಕ್ಷ ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಎಂದರು.
ಬೈಂದೂರಿನಲ್ಲಿ ಪಕ್ಷ ಬಲಿಷ್ಠವಾಗಿ ನೆಲೆಯೂರಿದೆ. ಅದಕ್ಕೆ ಪಕ್ಷನಿಷ್ಠ ಕಾರ್ಯಕರ್ತರ ಬಲ ಇದೆ. ಅದು ಮುಂದೆಯೂ ಒಗ್ಗಟ್ಟಿನಿಂದಿದ್ದು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎನ್ನುವುದನ್ನು ವಿರೋಧಿಗಳು ಅರಿತುಕೊಳ್ಳಬೇಕು ಎಂದು ದೀಪಕ್‍ಕುಮಾರ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್, ಕಾರ್ಯದರ್ಶಿ ಪ್ರಕಾಶ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಕೆ ಇದ್ದರು.