ಕಾರ್ಕಳ, ಹೆಬ್ರಿ, ಬ್ರಹ್ಮಾವರ ಧಾರಾಕಾರ ಮಳೆ – ಕುಂದಾಪುರದಲ್ಲಿ ಆಲಿಕಲ್ಲು ಮಳೆ!
ಉಡುಪಿ ಏ.11(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಹಲವೆಡೆ ಇಂದು ಸಂಜೆ ವೇಳೆಗೆ ಭಾರೀ ಗಾಳಿ ಮಳೆಯಾಗಿದೆ. ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಪರಿಸರದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು.ಕುಂದಾಪುರದ ಮಡಾಮಕ್ಕಿ, ಶೇಡಿಮನೆ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ.
ಇಂದು ಸಂಜೆ ಸುರಿದ ಗಾಳಿ ಮಳೆಗೆ ಕೆಲವೆಡೆ ತೋಟದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ. ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ ಅಮಾಸೆಬೈಲು ಹಾಗೂ ಉಳ್ಳೂರು -74 ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಅನಿರೀಕ್ಷಿತ ಮಳೆಗೆ ಗೋಳಿಯಂಗಡಿ ಪೇಟೆಯಲ್ಲಿ ನಡೆಯುತ್ತಿದ್ದ ಸಂತೆಗೆ ಅಡ್ಡಿಯಾಗಿತ್ತು. ಮಾರಾಟಕ್ಕೆ ಇಟ್ಟ ವಸ್ತುಗಳು ಕೊಚ್ಚಿ ಹೋಗಿದ್ದು, ದಿನನಿತ್ಯದ ಬಳಕೆ ಸಹಿತ ಇತರ ವಸ್ತುಗಳು ಮಳೆ ನೀರಿಗೆ ಒದ್ದೆಯಾಗಿ ವ್ಯಾಪಾರಿಗಳು ಪರದಾಡುವಂತಾಗಿತ್ತು.
ಹೆಬ್ರಿ ತಾಲ್ಲೂಕಿನ ಮುನಿಯಾಲು, ಶಿವಪುರ, ವರಂಗ, ಕುಚ್ಚೂರು, ಪಡುಕಡೂರು ಮತ್ತು ಕಾರ್ಕಳ ತಾಲ್ಲೂಕಿನ ಎಳ್ಳಾರೆ ಅಜೆಕಾರು ಶಿರ್ಲಾಲು, ಕೆರ್ವಾಸೆ ಸಹಿತ ವಿವಿದೆಡೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಗಾಳಿ ಮಳೆಯಿಂದಾಗಿ ಈ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿತ್ತು. ಬ್ರಹ್ಮಾವರ ಪರಿಸರದಲ್ಲೂ ತುಂತುರು ಮಳೆಯಾಗಿದ್ದು ಕೊಕ್ಕರ್ಣೆ, ಮಂದಾರ್ತಿ, ಬಾರ್ಕೂರು ಸಾಲಿಗ್ರಾಮ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮುದ್ದೂರು ವಿನಾಯಕ ರೈಸ್ ಮಿಲ್ ಬಳಿ ಸಿಡಿಲಿಗೆ ತೆಂಗಿನ ಮರಕ್ಕೆ ಬೆಂಕಿ ತಗುಲಿದೆ.