ಪರ್ಕಳ: ರಸ್ತೆ ಅಗಲೀಕರಣ ರಾ.ಹೆದ್ದಾರಿ ಅಧಿಕಾರಿ-ಭೂಮಾಲಕರ ನಡುವೆ ವಾಗ್ವಾದ

ಉಡುಪಿ, ಏ.11: ಪರ್ಕಳ ರಾಷ್ಟ್ರೀಯ ಹೆದ್ದಾರಿ (169ಎ) ಕಾಮಗಾರಿ ಸಂಬಂಧಿಸಿ ಪರ್ಕಳ ಪೇಟೆಯ ಮುಖ್ಯರಸ್ತೆಯಲ್ಲಿ ಕಟ್ಟಡ ತೆರವು ಕಾರ್ಯಕ್ಕೆ ವರ್ತಕರು ತೀವ್ರ ವಿರೋಧ ‌ವ್ಯಕ್ತಪಡಿಸಿದ ಕಾರಣದಿಂದ ತೆರವು ಕಾರ್ಯ ಸ್ಥಗಿತಗೊಂಡಿತು.

ಸ್ಥಳೀಯ ಅಂಗಡಿ ಮಾಲೀಕರಿಗೆ ನೋಟಿಸ್, ಯಾವುದೇ ಪರಿಹಾರ ಹಣ ನೀಡದೆ ಹೆದ್ದಾರಿ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಕಾರ್ಯ ಆರಂಭಿಸಿದ್ದಾರೆ‌ ಎಂದು ಸ್ಥಳೀಯರು ತಗಾದೆ ತೆಗೆದರು. ಮಾತ್ರವಲ್ಲದೆ ತೆರವು ಕಾರ್ಯಕೆ ತಡೆವೊಡಿದ್ದರು. ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡ ಘಟನೆ ರವಿವಾರ ಬೆಳಿಗ್ಗೆ ನಡೆಯಿತು.

ಸ್ಥಳಕ್ಕೆ ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ್ ಆಗಮಿಸಿ ಸ್ಥಳೀಯರ ಮನವೊಲಿಸಲು ಪ್ರಯತ್ನ ಪಟ್ಟರು. ಹೆದ್ದಾರಿ ಇಲಾಖರ ಹಿರಿಯ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಅಮೃತ್ ಶೆಣೈ ಮಾತನಾಡಿ, ಅಂಗಡಿ ಮಾಲೀಕರಿಗೆ ನೋಟಿಸ್ ನೀಡದೆ, ಏನು ಸ್ಪಷ್ಟನೆ ನೀಡದೆ ಕಟ್ಟಡ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸದೇ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದೇಶ ಪತ್ರ ಇಲ್ಲದೆ ಕಟ್ಟಡ ತೆರವಿಗೆ ಮುಂದಾದ ಅಧಿಕಾರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಹಿರಿಯ ಇಂಜಿನಿರ್ ನಾಗರಾಜ್ ನಾಯಕ್ ಸಂತ್ರಸ್ತರಿಗೆ ಸ್ಪಷ್ಟನೆ ನೀಡಿದರು. 3ಡಿ ನೋಟಿಫಿಕೆಶನ್ ಬಳಿಕ ಜಾಗ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬಂದಂತೆ. ಇದು ಅಂತಿಮ ನೋಟಿಸ್ ಇದ್ದ ಹಾಗೇ. ಈಗಾಗಲೆ ಹಲವು ಭಾರಿ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದರು. ಸುಕೇಶ್ ಕುಂದರ್ ಮಾತನಾಡಿ ನಾವು ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ ಪಡಿಸುತ್ತಿಲ್ಲ, ತೆರವು ಕಾರ್ಯಾಚರಣೆಯ ವಿಧಾನಕ್ಕೆ ವಿರೋಧ ಮಾಡುತ್ತಿರುವುದಾಗಿ ತಿಳಿಸಿದರು.

ಕೆಲಕಾಲ ಸಂತ್ರಸ್ತರು ಮತ್ತು ಇಂಜಿನಿಯರ್ ನಡುವೆ ಚರ್ಚೆ ನಡೆಯಿತು. ಸದ್ಯ ಕಟ್ಟಡ ತೆರವು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಇಂದು ಶುರು ಮಾಡಿದ ಕಟ್ಟಡ ಒಂದೆರಡು ದಿನಗಳಲ್ಲಿ ತೆರವು ಮಾಡುತ್ತೇವೆ.‌ ಬೇರೆ ಸಂತ್ರಸ್ತರ ಅಂಗಡಿ ಮುಂಗಟ್ಟು ತೆರವಿಗೆ ಒಂದು ವಾರ ಕಾಲಾವಕಾಶ ಕೊಡುತ್ತೇವೆ.‌ ಈಗಾಗಲೇ ಖಾಲಿ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭ ಮಾಡುತ್ತೇವೆ ಎಂದು ಇಂಜಿನಿಯರ್ ತಿಳಿಸಿದರು.

ಶಾಸಕ ಕೆ.ರಘುಪತಿ ಭಟ್‌ ಅವರೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿದರು. ಪರ್ಕಳ ಪೇಟೆ ಭಾಗದಲ್ಲಿ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಸಂಬಂಧ ಕಾಮಗಾರಿಗೆ ತಡೆಯಾಗಿತ್ತು. ಈಗ ಭೂಸ್ವಾಧೀನ ಪಡಿಸಲು 3ಎ ಸಿದ್ದಗೊಂಡು ಪರಿಹಾರ ಮಂಜೂರಾದ ಬಳಿಕ ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಸಂಬಂಧಿಸಿದ ಪರಿಹಾರ ಪ್ರಕ್ರಿಯೆಗಳು ತ್ವರತಗತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!