| ಉಡುಪಿ ಏ.11(ಉಡುಪಿ ಟೈಮ್ಸ್ ವರದಿ): ಇಷ್ಟರ ವರೆಗೆ ಡ್ರಾಮಾ ಶೈಲಿಯ ಕೊಂಕಣಿ ಚಿತ್ರವನ್ನು ನೋಡಿದ್ದ ಚಿತ್ರ ರಸಿಕರಿಗೆ ಕೊಂಕಣಿ ಭಾಷೆಯಲ್ಲಿ ಮೂಡಿಬರುತ್ತಿದೆ ಒಂದು ವಿಭಿನ್ನ ಚಿತ್ರ. ಅದುವೆ ಆಳ್ಶಿ ರೆಡೆ. ಇದೊಂದು ಹಾರರ್ ಕಾಮಿಡಿ ಜೊತೆಗೆ ಸ್ವಲ್ಪ ಮಟ್ಟಿನ ಆನಿಮೇಶನ್ ಕ್ರಿಯೇಟಿವಿಟಿಗಳನ್ನು ಒಳಗೊಂಡ ಚಿತ್ರವಾಗಿದೆ. ಅಲ್ಲದೆ ಕೊಂಕಣಿ ಚಲನ ಚಿತ್ರಗಳ ಮಟ್ಟಿಗೆ ಇದೊಂದು ಮೊಟ್ಟ ಮೊದಲ ಕಾಮಿಡಿ ಚಿತ್ರವಾಗಿದೆ.
ಸ್ಪಾರ್ಕಲ್ ಪ್ರೊಡಕ್ಷನ್ ನಡಿಯಲ್ಲಿ ಆರ್ ಆರ್ ಫ್ರೆಂಡ್ಸ್ ಇಂಟರ್ ನ್ಯಾಶನಲ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಗೋಡ್ವಿನ್ ಸ್ಪಾರ್ಕಲ್ ಮತ್ತು ಹೇರಾ ಪಿಂಟೋ ನಿರ್ದೇಶನ ಮಾಡಿದ್ದು, ಅವರೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ಅಗಸ್ಟ್ 13 ಕ್ಕೆ ತೆರೆಗೆ ಬರಲು ಸಿದ್ದವಾಗಿದ್ದು, ಚಿತ್ರದಲ್ಲಿ ತುಳು ನಟ ದೀಪಕ್ ರೈ ಪಾಣಾಂಜೆ, ಮರ್ವಿನ್ ಶಿರ್ವಾ, ವಿಲಿಯಂ ಪದ್ರಂಗಿ, ಸುಮನ, ಸಂದೀಪ್ ಮಲಾನಿ, ಹ್ಯಾನ್ಲಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಒಟ್ಟು 3 ಹಾಡುಗಳು ಇದ್ದು, ಎರಡು ಹಾಡನ್ನು ಬಾಲಿವುಡ್ ನ ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲ ಮತ್ತು ಮೋಹಿತ್ ಚೌಹಾನ್ ಹಾಡಿದ್ದಾರೆ. ಮತ್ತೊಂದು ಹಾಡನ್ನು ಕೊಂಕಣಿ ಯ ಎಲ್ಲಾ ಕಲಾವಿದರು ಹಾಡಿದ್ದು ಚಿತ್ರದಲ್ಲಿ ಇದೊಂದು ಕಲಾವಿದರನ್ನು ಪರಿಚಯಿಸುವ ಹಾಡಾಗಿದ್ದು ಚಿತ್ರಕ್ಕೆ ಪಾಟ್ಸನ್ ಪಿರೇರಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಯತೀಶ್ ಪೂಜಾರಿ, ರೇಯನ್ ಮಾಗ್ನೆಟೊ ಕಾರ್ಯನಿರ್ವಹಿಸಿದ್ದಾರೆ. ಛಾಯಾ ಗ್ರಾಹಕರಾಗಿ ಪ್ರಜ್ವಲ್ ಸುವರ್ಣ, ಎಸೆ.ಎಫ್.ಎಕ್ಸ್ ಲಾಯಿ ವೆಲೆಂಟೈನ್, ಹಿನ್ನೆಲೆ ಸಂಗೀತಗಾರರಾಗಿ ಪ್ರಜ್ಯುತ್ ಡೇಸಾ ಕಾರ್ಯನಿರ್ವಹಿಸಿದ್ದಾರೆ.
ಒಟ್ಟಿನಲ್ಲಿ ಇದೊಂದು ಕಂಪ್ಲೀಟ್ ಪ್ಯಾಕೇಜ್ ಚಿತ್ರವಾಗಿದ್ದು ಈ ಚಿತ್ರದಲ್ಲಿ ಹಾಸ್ಯ, ಹಾರರ್, ಹಾಡುಗಳ ಮನರಂಜನೆ ಜೊತೆಗೆ ಆನಿಮೇಶನ್ ಕ್ರಿಯೇಟಿವಿಟಿ ನಿಮಗೆ ನೋಡಲು ಸಿಗುತ್ತದೆ.
| |