ಶಿರ್ವಾ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ನಾಲ್ವರ ಬಂಧನ, 9 ಜಾನುವಾರುಗಳ ರಕ್ಷಣೆ
ಶಿರ್ವಾ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 9 ಜಾನುವಾರುಗಳನ್ನು ರಕ್ಷಿಸಿದ ಘಟನೆ ಕುರ್ಕಾಲು ಗ್ರಾಮದ ಸುಭಾಸ್ ನಗರ ಕುಂಜಾರುಗಿರಿ ಕ್ರಾಸ್ ನಲ್ಲಿ ಇಂದು ನಡೆದಿದೆ.
ಮೂಡುಬೆಟ್ಟು ಗ್ರಾಮದ ವಲೇರಿಯನ್ ಕ್ಯಾಸ್ತಲಿನೋ( 54), ಅಮಿತ್ ಕೋಟ್ಯಾನ್ (40 ), ಕುರ್ಕಾಲು ಗ್ರಾಮದ ಶೇಕ್ ಅಬ್ದುಲ್ಲಾ(33), ಸಂದೇಶ್ ಜತ್ತನ್ನ (40) ಬಂಧಿತ ಆರೋಪಿಗಳು. ಬಂಧಿತರಿಂದ 2 ವಾಹನಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 5 ದನ ಮತ್ತು 4 ಕರುಗಳನ್ನು ರಕ್ಷಿಸಲಾಗಿದೆ. 2 ವಾಹನಗಲ್ಲಿ ಹಿಂಸಾತ್ಮಕರೀತಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಶಿರ್ವ ಪೊಲೀಸರು ಇಂದು ಬೆಳಿಗ್ಗೆ ಪಡುಬೆಳ್ಳೆ ಪರಿಸರದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಈ ವೇಳೆ ಬೆಳ್ಳೆ ಕಡೆಯಿಂದ ಸುಭಾಸ್ ನಗರ ಕಡೆಗೆ ವೇಗವಾಗಿ 2 ವಾಹನಗಳು ಹೋಗಿದ್ದು, ಕೂಡಲೇ ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಕುರ್ಕಾಲು ಗ್ರಾಮದ ಸುಭಾಸ್ ನಗರ ಕುಂಜಾರುಗಿರಿ ಕ್ರಾಸ್ ನಲ್ಲಿ ತಡೆದು ಪರಿಶೀಲಿಸಿದಾಗ ಜಾನುವಾರುಗಳನ್ನು ಹಿಂಸಾತ್ಮಕವಾದ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಅಲ್ಲದೆ ಆರೋಪಿಗಳು ಜಾನುವಾರುಗಳನ್ನು ಕ್ರಯಕ್ಕೆ ತೆಗೆದುಕೊಂಡು ಅದನ್ನು ಹಿಂಸಾತ್ಮಕ ರೀತಿಯಲ್ಲಿ ಕಾಲುಗಳಿಗೆ ಹಗ್ಗ ಕಟ್ಟಿ ವಧೇ ಮಾಡಿ ಅದರ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ 2 ವಾಹನಗಳಲ್ಲಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.