ಮಣಿಪಾಲ ಆರೋಗ್ಯ ಕಾರ್ಡ್ 2020: ನೋಂದಾವಣಿ ಪ್ರಕ್ರಿಯೆ ಪ್ರಾರಂಭ

ಮಣಿಪಾಲ 17ನೇ ಜೂನ್: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)  ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು  ಶ್ರೀ ಶ್ರೀಧರ ಹಾಗೂ ಅವರ ಕುಟುಂಬಕ್ಕೆ ಮೊದಲ   ಕಾರ್ಡನ್ನು  ಹಸ್ತಾಂತರಿಸುವ ಮೂಲಕ ಮಣಿಪಾಲ ಆರೋಗ್ಯ ಕಾರ್ಡ್ 2020ರ ನೋಂದಾವಣೆಗೆ ಚಾಲನೆ ನೀಡಿದರು.  ಮಾಹೆ ಮಣಿಪಾಲದ ಉಪಕುಲಪತಿಗಳಾದ  ಡಾ.ವಿನೋದ್ ಭಟ್,  ಕುಲಸಚಿವರಾದ ಡಾ.ನಾರಾಯಣ ಸಭಾಹಿತ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ ಡಾ.ಬಲ್ಲಾಳ್ ಮಾತನಾಡುತ್ತಾ “ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವೀ 20 ವರ್ಷಗಳನ್ನು ಪೂರೈಸಿದ್ದೇವೆ ಎಂದು ತಿಳಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ನಮ್ಮ ಸಂಸ್ಥೆಯ ಸಂಸ್ಥಾಪಕ, ದಿವಂಗತ ಡಾ. ಟಿಎಂಎ ಪೈಯವರ ಕನಸನ್ನು ಈಡೇರಿಸಲು, ಆರೋಗ್ಯ ಸೇವೆಯನ್ನು ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮಣಿಪಾಲ್ ಆರೋಗ್ಯಕಾರ್ಡನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಕಳೆದ 20 ವರ್ಷಗಳಲ್ಲಿ, ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ.

20ನೇ ವರ್ಷದ ಅಂಗವಾಗಿ, ನಾವು ಕಾರ್ಡ್‌ಗಳನ್ನು ಸುಲಭವಾಗಿ ನೋಂದಾಯಿಸಲು, ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ್ ಸ್ಮಾರ್ಟ್ ಕಾರ್ಡನ್ನು ಪರಿಚಯಿಸುತ್ತಿದ್ದೇವೆ ಮತ್ತು ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು ಮತ್ತು ಸ್ಮಾರ್ಟ್ ಕಾರ್ಡನ್ನು ತಮ್ಮ ಪೋಕೆಟಗಳಲ್ಲಿ ಇಟ್ಟುಕೊಳ್ಳಬಹುದು. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ” ಎಂದು ಅವರು ಹೇಳಿದರು.

20ನೇ ವರ್ಷದ ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯು, ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯ ಜೊತೆಗೆ ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ   250/-, ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ   500/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ)  650/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ  400/-, ಕುಟುಂಬಕ್ಕೆ  700/- ಮತ್ತು ಕುಟುಂಬ ಪ್ಲಸ್ ಯೋಜನೆಗೆ  850/- ಇರುತ್ತದೆ.

“ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ 50% ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ 30% ರಿಯಾಯಿತಿ, ವಿಕಿರಣಶಾಸ್ತ್ರ ಪರೀಕ್ಷೆಗಳ ಮೇಲೆ 20% ರಿಯಾಯಿತಿ, ಡಯಾಲಿಸಿಸ್‌ನಲ್ಲಿ  100/ -, ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ 12%ರವರೆಗೆ ರಿಯಾಯಿತಿ ಮತ್ತು ಒಂದೊಮ್ಮೆ ಜನರಲ್ ವಾರ್ಡ್‌ನಲ್ಲಿನಲ್ಲಿ ಒಳರೋಗಿಯಾದ್ದಲ್ಲಿ ಉಪಯೋಗವಾಗುವ ವಸ್ತುಗಳು ಮತ್ತು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಬಿಲ್‌ನಲ್ಲಿ 25% ರಿಯಾಯಿತಿ ಸಿಗುತ್ತದೆ.ಎಂದು ಅವರು ಹೇಳಿದರು.

ಜನರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ನಮ್ಮ ಅಧಿಕೃತ ಏಜೆಂಟರ ಬಳಿ ನೋಂದಾವಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9980854700 / 0820-2923748 ಸಂಖ್ಯೆಗೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!