ಬೈಂದೂರು ಶಾಸಕರಿಗೆ ಯಾವುದೇ ವ್ಯವಹಾರಕ್ಕೆ ಚೆಕ್ ನೀಡಿಲ್ಲ, ಮೂಕಾಂಬಿಕೆ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ: ಬಿಜೆಪಿ ಪ್ರ.ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು
ಉಡುಪಿ,ಏ.9(ಉಡುಪಿ ಟೈಮ್ಸ್ ವರದಿ): ಚುನಾವಣೆಗೂ ಮೊದಲು ನಮ್ಮ ಕುಟುಂಬದವರೊಂದಿಗೆ ಆತ್ಮೀಯವಾಗಿದ್ದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೋರ್ಡ್ ಹೈಸ್ಕೂಲ್ನ ದೈಹಿಕ ಶಿಕ್ಷಕ ಪ್ರಕಾಶಚಂದ್ರ ಶೆಟ್ಟಿ ಹಾಗೂ ವಕೀಲ ಸದಾನಂದ ಶೆಟ್ಟಿಯವರಿಂದ ಆಗುತ್ತಿರುವ ನಿರಂತರ ಮಾನಸಿಕ ಹಿಂಸೆಗಳಿಂದ ಕುಟುಂಬ ರೋಸಿ ಹೋಗಿದ್ದೇನೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾತನಾಡಿದ ಅವರು, ನಾನು ಭಾರತ್ ಟೈಲ್ಸ್ ಎಂಬ ಉದ್ಯಮವನ್ನು ಆರಂಭಿಸಿದ್ದು, ವ್ಯವಹಾರಕ್ಕಾಗಿ ಕುಂದಾಪುರದ ವಕೀಲ ಸದಾನಂದ ಶೆಟ್ಟಿ ಅವರ ಬಳಿ 20 ಲಕ್ಷ ಬಡ್ಡಿ ಹಣ ಪಡೆದಿದ್ದದೆ. ಈ ಸಂದರ್ಭದಲ್ಲಿ ಸದಾನಂದ ಶೆಟ್ಟಿ ಅವರಿಗೆ ನೀಡಿದ್ದ ಚೆಕ್ನ್ನು ಬಳಸಿಕೊಂಡು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ನನ್ನ ಮೇಲೆ ಐದು ಲಕ್ಷ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ. ನಾನು ಸುಕುಮಾರ್ ಶೆಟ್ಟಿ ಅವರಿಗೆ ಯಾವುದೇ ಖಾಲಿ ಚೆಕ್ ನೀಡಿಲ್ಲ. ಒಂದು ವೇಳೆ ನಾನು ಕೊಟ್ಟಿದ್ದೇ ಆಗಿದ್ದಲ್ಲಿ ಅವರು ಕೊಲ್ಲೂರು ಮೂಕಾಂಬಿಕೆ ಎದುರು ಬಂದು ಪ್ರಮಾಣ ಮಾಡಲಿ ಎಂದು ಬೈಂದೂರು ಶಾಸಕರಿಗೆ ಸವಾಲು ಹಾಕಿದ್ದಾರೆ.
ಕುಂದಾಪುರದ ವಕೀಲ ಸದಾನಂದ ಶೆಟ್ಟಿ ಅವರ ಬಳಿ ವ್ಯವಹಾರಕ್ಕೆ ಸಂಬಂಧಿಸಿ 20 ಲಕ್ಷ ಬಡ್ಡಿ ಹಣ ಪಡೆದುಕೊಂಡಿದ್ದು, ಆ ಸಮಯದಲ್ಲಿ ಖಾಲಿ ಪೇಪರ್ ಗೆ ಸಹಿ ಹಾಗೂ 5 ಖಾಲಿ ಚೆಕ್ ಗಳನ್ನು ಪಡೆದುಕೊಂಡಿದ್ದರು. ನಂತರದ ದಿನಗಳಲ್ಲಿ ಅಸಲು ಹಾಗೂ ಬಡ್ಡಿ ಸೇರಿಸಿ ಒಟ್ಟು 48 ಲಕ್ಷ ರೂ ವನ್ನು ಬ್ಯಾಂಕ್ ಖಾತೆ ಮೂಲಕ ಅವರಿಗೆ ಸಂದಾಯ ಮಾಡಿದ್ದೆ, ಆದರೆ ಹಣ ಸಂದಾಯ ಮಾಡಿದ ಬಳಿಕವೂ ಅವರು ಚೆಕ್ ವಾಪಾಸ್ಸು ನೀಡಿಲ್ಲ.
ಈ ಬಗ್ಗೆ ನನಗೆ ಬಡ್ಡಿ ಹಣ ಕೊಡಿಸಿದ ಹಾಲಾಡಿ ಜಯರಾಂ ಶೆಟ್ಟಿ ಮತ್ತು ಬಾಂಡ್ಯಾ ಸುಭಾಸ್ ಶೆಟ್ಟಿ ಅವರ ಬಳಿ ಮನವಿ ಮಾಡಿಕೊಂಡಾಗ ಅವರು ಸುಭಾಸ್ ಶೆಟ್ಟಿ ಮನೆಯಲ್ಲಿ ಪಂಚಾಯಿತಿ ನಡೆಸಿ ವಿಚಾರ ಪರಿಶೀಲನೆ ನಡೆಸಿದ್ದರು. ಆಗ ಸದಾನಂದ ಶೆಟ್ಟಿ ಅವರು ಬಡ್ಡಿ ಹಣ ವಾಪಾಸ್ಸು ಬಂದಿದ್ದು ಚೆಕ್ 3 ದಿನಗಳಲ್ಲಿ ವಾಪಾಸ್ಸು ನೀಡುವುದಾಗಿ ತಿಳಿಸಿದ್ದರು. ಆದರೆ 3 ದಿನಗಳು ಕಳೆದರೂ ಅವರು ಚೆಕ್ ವಾಪಾಸ್ಸು ನೀಡಿರಲಿಲ್ಲ. ಕುಂದಾಪುರದ ಬೋರ್ಡ್ ಹೈಸ್ಕೂಲ್ನ ದೈಹಿಕ ಶಿಕ್ಷಕ ಪ್ರಕಾಶ್ ಚಂದ್ರ ಶೆಟ್ಟಿ ಇವರೂ ಅವರೊಂದಿಗೆ ಸೇರಿಕೊಂಡು ನಾನು ಬಡ್ಡಿ ಹಣ ಪಡೆಯುವಾಗ ನೀಡಿದ್ದ ಖಾಲಿ ಚೆಕ್ ಗಳಲ್ಲಿ ಒಂದನ್ನು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ನೀಡಿದ್ದು, ಆ ಚೆಕ್ ಮೂಲಕ ಅವರು ನನ್ನ ಮೇಲೆ ಸುಳ್ಳು ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ. ಅಲ್ಲದೆ ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡದ್ದರಿಂದ ಜಾಗದ ವಿಚಾರದಲ್ಲೂ ಅವರು ಸುಳ್ಳು ಮಾಹಿತಿ ನೀಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ಯಾವುದೇ ವ್ಯಕ್ತಿಗಾಗಿ ಕಾರ್ಯ ಮಾಡದೇ ಪಕ್ಷಕ್ಕಾಗಿ ದುಡಿದಿದ್ದೇವೆ. ಪಕ್ಷವನ್ನು ಕಟ್ಟುವಲ್ಲಿ ಬೂತ್ ಮಟ್ಟದಲ್ಲಿ ಶ್ರಮಿಸಿದ್ದೇವೆ. ನಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ಪಕ್ಷದ ಕೆಸಲವನ್ನು ಮನೆ ಮನೆಗೆ ತಲುಪಿಸುವಲ್ಲಿ ದುಡಿದಿದ್ದೇವೆ. ಹೀಗಿರುವಾಗ ಚುನಾವಣೆ ಸಂದರ್ಭದಲ್ಲಿ ಗೆದ್ದರೆ ಎಗ್ಗಿಲ್ಲದೆ ನಡೆಯುತ್ತಿರುವ ಮಟ್ಕಾ, ಇಸ್ಪಿಟು, ಗಳನ್ನು ಬಂದ್ ಮಾಡುವುದಾಗಿ ಜನತೆಗೆ ನೀಡಿದ ಆಶ್ವಾಸನೆ ಈಡೇರಿಸದೆ ಇದ್ದಾಗ ಅದನ್ನು ಶಾಸಕರ ಬಳಿ ಪ್ರಶ್ನಿಸಿದ್ದೆ. ಇದಕ್ಕೆ ನನಗೆ ಗದರಿಸಿದ್ದರು. ಈ ವೇಳೆ ಅವರು ಮಾಡುತ್ತಿರುವುದು ತಪ್ಪು ಎಂದು ಅವರ ವಿರುದ್ಧ ಹೇಳಿದಕ್ಕೆ ಅವರು ನನಗೆ ಬೆದರಿಕೆ ಹಾಕಿದ್ದರು. ಇದೇ ವಿಚಾರವಾಗಿ ನಮ್ಮ ಶಾಸಕರ ನಡುವೆ ವೈಮನಸ್ಸು ಉಂಟಾಗಿತ್ತು. ಅಲ್ಲದೆ ನನ್ನ ಮೇಲಿನ ದ್ವೇಶದಿಂದ ಮುಂಖ್ಯಮಂತ್ರಿಗಳ ಹೆಸರು ಹೇಳಿಕೊಂಡು ಅವರು ಹೆದರಿಸುತ್ತಿದ್ದಾರೆ ಎಂದು ತಿಳಿಸಿದರು.
ಇಷ್ಟೇ ಅಲ್ಲದೇ ನಾನು ಮನೆಯಲ್ಲಿರುವ ಸಂದರ್ಭ ನನ್ನ ಮೊಬೈಲ್ಗೆ ಕರೆ ಮಾಡಿದ ಶಾಸಕ ಸುಕುಮಾರ ಶೆಟ್ಟರು ನನ್ನ ತಾಯಿ, ಹೆಂಡತಿ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿಸುತ್ತೇನೆ. ನಿನ್ನ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದೆಲ್ಲಾ ಬೆದರಿಕೆ ಹಾಕಿದ್ದು, ಇದನ್ನು ಕೇಳಿಸಿಕೊಂಡ ನನ್ನ ಕುಟುಂಬ ಹೆದರಿ ಕಂಗಾಲಾಗಿದೆ, ಪ್ರತಿ ದಿನವು ಭಯದ ನೆರಳಿನಲ್ಲಿ ಬದುಕುವಂತಾಗಿದೆ. ನನ್ನ ಕುಟುಂಬ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದೆ ಇದೆಲ್ಲದರ ಬಗ್ಗೆ ನಾನು ನನ್ನ ಪಕ್ಷದ ಎಲ್ಲಾ ಹಂತದ ನಾಯಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದ್ದರೂ ಅವರ ಕಿರುಕುಳ ಹೆಚ್ಚುತ್ತಲೇ ಇದೆ ಎಂದು ತಿಳಿಸಿದರು.
ಇನ್ನು ನನ್ನ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು, ಸಂಸದರ ಗಮನಕ್ಕ ತಂದಿದ್ದು, ಅವರು ಸುಕುಮಾರ್ ಶೆಟ್ಟಿ ಅವರ ಬಳಿ ಮಾತನಾಡಿ ಈ ಬಗ್ಗೆ ತಿಳಿ ಹೇಳಿದ್ದಾರೆ.. ಆದರೆ ಅವರು ಯಾರ ಮಾತನ್ನು ಕೇಳದೆ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ನಾನು ಕೊಲ್ಲುರು ಶ್ರೀ ಮೂಕಾಂಬಿಕೆ ಸಾಕ್ಷಿಯಾಗಿ ಸುಕುಮಾರ್ ಶೆಟ್ಟಿ ಅವರಿಗೆ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿ ಚೆಕ್ ನೀಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನಾನು ಅವರಿಗೆ ಚೆಕ್ ನೀಡಿದ್ದೇ ಆದಲ್ಲಿ ಅವರು ಹೇಳಿ ಕೊಳ್ಳುವಂತೆ ಮೂಕಾಂಬಿಕೆಯ ಭಕ್ತರಾಗಿದ್ದಲ್ಲಿ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ ಬೈಂದೂರು ಶಾಸಕರಿಗೆ ಸವಾಲು ಹಾಕಿದರು