ಸಾಲಗಾರರಿಂದ ರಕ್ಷಿಸಿಕೊಳ್ಳಲು 1 ಕೋಟಿ ರೂ. ಬಹುಮಾನ ಸಿಕ್ಕಿದೆಂದ ಸೆಕ್ಯೂರಿಟಿ ಗಾರ್ಡ್!
ಮಂಗಳೂರು : ಸೆಕ್ಯೂರಿಟಿ ಗಾರ್ಡ್ ಒಬ್ಬರು ಲಾಟರಿಯಲ್ಲಿ ಕೋಟಿ ಗೆದ್ದ ಸುದ್ದಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಸೆಕ್ಯೂರಿಟಿ ಗಾರ್ಡ್ಗೆ ಯಾವುದೇ ಲಾಟರಿ ಗೆದ್ದಿಲ್ಲ. ಅಷ್ಟೇ ಅಲ್ಲದೆ ಈ ಸೆಕ್ಯೂರಿಟಿ ಈಗಾಗಲೇ ಲಕ್ಷ ಲಕ್ಷ ಸಾಲದಲ್ಲಿ ಮುಳುಗಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.
ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟಿನ ಖಾಸಗಿ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿರುವ ಕೇರಳದ ಕಲ್ಲಿಕೋಟೆ ನಿವಾಸಿಯಾಗಿರುವ ಮೊಯ್ದಿನ್ ಕುಟ್ಟಿ(65) ಒಂದು ಕೋಟಿ ರೂ. ಬಂಪರ್ ಬಹುಮಾನ ವಿಜೇತರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅಲ್ಲದೆ ಕೇರಳ ಮೂಲದ ವ್ಯಕ್ತಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯಲ್ಲಿ 1 ಕೋಟಿ ರೂ. ಬಂಪರ್ ಬಹುಮಾನ ಪಡೆದ ಮೊಯ್ದಿನ್ ಓರ್ವ ಅದ್ರಷ್ಟಶಾಲಿ ಎಂದೂ ಬಣ್ಣಿಸಲಾಗಿತ್ತು.
ಆದರೆ ಇದೀಗ ಇದೊಂದು ಸುಳ್ಳು ಸುದ್ದಿಯಾಗಿದ್ದು, ಎಲ್ಲೆಡೆ ವೈರಲ್ ಆಗಿರುವ ಮೊಯ್ದಿನ್ ಅವರದ್ದು ಎನ್ನಲಾಗಿದ್ದ ಟಿಕೆಟ್ ಕಂಪ್ಯೂಟರ್ ನಲ್ಲಿ ಎಡಿಟ್ ಮಾಡಿದ ಟಿಕೆಟ್ ಆಗಿತ್ತು. ಅವರು ಯಾವುದೇ ಲಾಟರಿ ಗೆದ್ದಿಲ್ಲ ಎಂಬ ಸುದ್ದಿ ಇದೀಗ ಸದ್ದು ಮಾಡುತ್ತಿದೆ.
ಮೊಯ್ದಿನ್ ಕುಟ್ಟಿ ಅವರು ಪತ್ನಿ, ಮೂವರು ಮಕ್ಕಳನ್ನು ಹೊಂದಿದ್ದು, ಕೆಲಸ ಅರಸುತ್ತಾ ದಕ್ಷಿಣ ಕನ್ನಡದ ತೊಕ್ಕೊಟ್ಟಿಗೆ ಬಂದು ಕೆಲವು ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದ ಅವರು, ಕಳೆದ ವಾರ ತೊಕ್ಕೊಟ್ಟಿನ ಟೈಲರ್ ರವಿ ಎಂಬವರಿಂದ 500 ರೂ. ಸಾಲ ಪಡೆದು ಉಪ್ಪಳಕ್ಕೆ ಹೋಗಿದ್ದು, ಏ.4ರಂದು ಡ್ರಾಗೊಳ್ಳುವ 100 ರೂ. ಬೆಲೆಯ ಭಾಗ್ಯಮಿತ್ರ ಟಿಕೆಟ್ ಖರೀದಿಸಿದ್ದರು. ಈ ಲಾಟರಿಯಲ್ಲಿ ಐವರಿಗೆ ತಲಾ 1 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದೆ ಎಂದು ವರದಿಯಾಗಿತ್ತು.