ನಿಟ್ಟೂರು ಶಾಲೆ ನಿವೃತ್ತ ಶಿಕ್ಷಕ ಕೆ.ಎ.ಪಿ. ಭಟ್ ನಿಧನ
ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ಕೆ.ಎ.ಪಿ. ಭಟ್ ಅವರು ಇಂದು(ಏ.8) ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವು ಇಂದು ಸಂಜೆ 5.30 ಗಂಟೆಗೆ ಜರಗಲಿದ್ದು, ಇವರ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಮುಖ್ಯೋಪಾಧ್ಯಾಯರು ಅಧ್ಯಾಪಕ ವೃಂದ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ, ಇರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಓರ್ವ ಪುತ್ರ ಡಾ.ಶ್ರೀಶ ಕೊಯಮುತ್ತೂರಿನಲ್ಲಿ ಪ್ರಖ್ಯಾತ ನೇತ್ರತಜ್ಞರಾಗಿದ್ದು, ಇನ್ನೋರ್ವ ಮಗ ಮುರಾರಿ ಉಡುಪಿಯಲ್ಲಿ ನೋಟರಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆ.ಎ.ಪಿ. ಭಟ್ ಅವರು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ ನಿಟ್ಟೂರು ಪ್ರೌಢಶಾಲೆಯಲ್ಲಿ ಅಧ್ಯಾಪಕ ಹಾಗೂ ಮುಖ್ಯೋಪಾಧ್ಯಾಯರಾಗಿ ಹಲವಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಅಲ್ಲದೆ ಇವರು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ, ಶಾಲಾಭಿವೃದ್ಧಿಗಾಗಿ ಶ್ರಮಿಸಿದ್ದರು. ಇವರು ಓರ್ವ ಉತ್ತಮ ವಾಲಿಬಾಲ್ ಕ್ರೀಡಾಪಟುವಾಗಿದ್ದು, ನಾಟಕದ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದರು.