ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅಮಾನತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತ
ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಸದ್ಯ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಅವರನ್ನು ಅಮಾನತುಗೊಳಿಸಿರುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದೀಗ ಅಧಿಕಾರಿಯ ಅಮಾನತು ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಅಧಿಕಾರಿಯ ಅಮಾನತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಅನೇಕ ಮಂದಿ ಅಮಾನತುಗೊಂಡಿರುವ ಅಧಿಕಾರಿಯನ್ನು ಬೆಂಬಲಿಸಿ ಪ್ರತಿಕ್ರಿಯೆ ನಿಡಿದ್ದಾರೆ. ಇದರೊಂದಿಗೆ ಅಧಿಕಾರಿಯ ಪರವಾಗಿ ಅನೇಕರು ಟ್ವೀಟ್ ಮಾಡಿದ್ದು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಮಾನತಿನ ಕುರಿತಾಗಿ ಏ.7 ರಂದು ‘ಉಡುಪಿ ಟೈಮ್ಸ್‘ಗೆ ಪ್ರತಿಕ್ರಿಯೆ ನೀಡಿದ್ದ ಕೆ. ಮಂಜುಳಾ ಅವರು, ಭ್ರಷ್ಟಾಚಾರ ಮುಕ್ತ ಕಚೇರಿಯನ್ನಾಗಿಸಲು ಹೋರಾಟ ನಡೆಸಿದಕ್ಕಾಗಿ ನನ್ನನ್ನು ಅಮಾನತು ಗೊಳಿಸಿದರು ಎಂದು ತಿಳಿಸಿದ್ದರು. ಅಲ್ಲದೆ ತಾವು ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದಕ್ಕಾಗಿ ದ್ವೇಷದಿಂದ ತನ್ನ ಬಗ್ಗೆ ದೂರು ನೀಡಿ ಅಮಾನತು ಮಾಡಿದ್ದಾರೆ ಎಂದು ತೀಳಿಸಿದ್ದರು. ಈ ಸುದ್ದಿ ‘ಉಡುಪಿ ಟೈಮ್ಸ್‘ ನಲ್ಲಿ ಪ್ರಕಟವಾಗುತ್ತಿದ್ದಂತೆ ಅನೇಕರು ಅಧಿಕಾರಿಯ ಪರವಾಗಿ ಬೆಂಬಲ ಸೂಚಿಸಿದ್ದಾರೆ.
ಈ ಕುರಿತಾಗಿ ಅಧಿಕಾರಿಯ ಕಾರ್ಯದ ಬಗ್ಗೆ ಅರಿತ ಅನೇಕರು ಪ್ರತಿಕ್ರಿಯೆ ನೀಡಿದ್ದು, ಅವರೊಬ್ಬರು ದಕ್ಷ, ನಿಷ್ಟಾವಂತ, ಪ್ರಮಾಣಿಕ ಅಧಿಕಾರಿಯಾಗಿದ್ದು ಅದೆಷ್ಟೋ ಶಿಕ್ಷಕರಿಗೆ ಮಾದರಿಯಾಗಿದ್ದರು ಎಂಬುದಾಗಿ ತಿಳಿಸಿದ್ದಾರೆ. ಅಲ್ಲದೆ ಮಂಜುಳಾ ಅವರು ಈ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಸ್ನೇಹಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದರು ದಯವಿಟ್ಟು ಅವರಿಗೆ ನ್ಯಾಯ ಸಿಗಬೇಕು. ಅವರಿಗೆ ನ್ಯಾಯ ಸಿಕ್ಕರೆ ನಮ್ಮ ಎಲ್ಲ ಶಿಕ್ಷಕ ವರ್ಗಕ್ಕೆ ನ್ಯಾಯ ಸಿಕ್ಕಂತ್ತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ತಮ್ಮ ಕೆಲಸದ ಮೂಲಕ ಅನೇಕರಿಂದ ಮೆಚ್ಚುಗೆ ಪಡೆದಿದ್ದ ಅಧಿಕಾರಿಯ ಅಮಾನತಿಗೆ ವಿರೋಧ ವ್ಯಕ್ತ ಪಡಿಸಿದ ಶಿಕ್ಷಕರೊಬ್ಬರು ಒಬ್ಬ ನಿಷ್ಟಾವಂತ ಅಧಿಕಾರಿಗೆ ಈ ರೀತಿ ಅನ್ಯಾಯ ಆದರೆ ಶಿಕ್ಷಕರಾಗಿ ನಾವು ಮಕ್ಕಳಿಗೆ ಪ್ರಾಮಾಣಿಕತೆಯ ಪಾಠವನ್ನು ಯಾವ ಧೈರ್ಯದಿಂದ ಹೇಳಲು ಸಾಧ್ಯ ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಇದರೊಂದಿಗೆ ಅಧಿಕಾರಿಯ ಅಮಾನತಿನ ವಿಚಾರವಾಗಿ ಆಡಳಿತದ ವಿರುದ್ಧ ವಿರೋಧ ವ್ಯಕ್ತಪಡಿಸಿರುವವರು ಈ ಅಮಾನತು ಕಾನೂನು ಬಾಹಿರ ಇದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಸರಳ, ನಿಷ್ಠಾವಂತ ಅಧಿಕಾರಿಯಾದ ಮಂಜುಳಾ ಮೇಡಂ ಅಮಾನತು ಪ್ರಾಮಾಣಿಕತೆಗೆ ಬೆಲೆ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಆದರೆ ಮಂಜುಳಾ ಮೇಡಂ ಅವರ ಅಮಾನತ್ತಿನಿಂದ ನಷ್ಟವಾಗಿರೋದು ಶಿಕ್ಷಣ ಇಲಾಖೆ ಹಾಗೂ ಅಲ್ಲಿನ ಪ್ರಾಮಾಣಿಕ ಶಿಕ್ಷಕರಿಗೇ ಹೊರತು, ಮೇಡಂಗಲ್ಲ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ, ಸತ್ಯಕ್ಕೇ ಯಾವತ್ತೂ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಭರಿತ ಪ್ರತಿಕಿಯೆಗಳೂ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಆದರೆ ವಲಯ ಕ್ಷೇತ್ರ ಶೀಕ್ಷಣಾಧಿಕಾರಿಗಳ ಅಮಾನತಿನ ವಿಚಾರಕ್ಕೆ ಸಂಬಂಧಿಸಿ ಯಾವುದೇ ವಿರೋಧ ಹಾಗೂ ನಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದೇ ಇರುವುದು ವಿಶೇಷ. ಹಾಗೂ ಇದು ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ ಎಂಬುದಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇನ್ನು 15ಕ್ಕೂ ಅಧಿಕ ಶಿಕ್ಷಕರು ಇವರ ಅಮಾನತಿಗೆ ವಿರೋಧಿಸಿ, ಅವರ ಕುರಿತಾಗಿ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ಅವರ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿದಂತಿದೆ. ಈ ಎಲ್ಲಾ ಪ್ರತಿಕ್ರಿಯೆಗಳು ಅಧಿಕಾರಿಯ ಅಮಾನತಿನ ಬಗ್ಗೆ ಸೂಕ್ತ ಕ್ರಮದ ಅಗತ್ಯತೆ ಇದೆ ಎಂಬುದನ್ನು ತೋರಿಸುತ್ತಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಧಿಕಾರಿಗೆ ನ್ಯಾಯ ಸಿಗಬೇಕು ಎಂಬ ಆಗ್ರಹಗಳೂ ಕೇಳಿ ಬಂದಿದೆ.
ಇನ್ನು ಅಧಿಕಾರಿಯನ್ನು ಅಮಾನತು ಗೊಳಿಸಿರುವುದನ್ನು ಖಂಡಿಸಿ, ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಎಂಬವರಿ ಟ್ವೀಟ್ ಮಾಡಿದ್ದು, ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ ಬಿಜೆಪಿ ಕರ್ನಾಟಕ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರಕ್ಕೆ ಸಹಕರಿಸದ ಕಾರಣಕ್ಕೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಿರುವ ಘಟನೆ ಖಂಡನೀಯ! ಎಂದು ಬರೆದುಕೊಂಡಿದ್ದಾರೆ.
ಇದೊಂದಿಗೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ದಬ್ಬಾಳಿಕೆ ತೋರುವ ಪ್ರವೃತ್ತಿಯನ್ನು ನಿಲ್ಲಿಸಿ. ಜನಪರವಾದ ಮತ್ತು ಉತ್ತಮ ಆಡಳಿತವನ್ನು ನೀಡುವತ್ತ ಗಮನಹರಿಸಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ, ಪ್ರಾಮಾಣಿಕ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದರ ಹಿಂದಿನ ಉದ್ದೇಶವೇನು? ಅಲ್ಲಿನ ಸ್ಥಳೀಯ ಪ್ರಭಾವಿಗಳ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲೆಷ್ಟು? ಎಂದು ಬರೆದುಕೊಂಡು ಸಚಿವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್ ಅವರು ಟ್ವೀಟ್ ಮಾಡಿ ಸ್ಥಳೀಯ ಬಿಜೆಪಿ ಕರ್ನಾಟಕದ ನಾಯಕರು ಮತ್ತು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸೊಪ್ಪು ಹಾಕದ ಕಾರಣಕ್ಕೆ ಉಡುಪಿ ವಲಯ ಶಿಕ್ಷಣಾಧಿಕಾರಿಯನ್ನು ಅಮಾನತುಗೊಳಿಸುವ ಕೆಲಸ ಮಾಡಿರುವ ಬಿಎಸ್‍ವೈ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಮಹಿಳಾ ಅಧಿಕಾರಿಗಳ ಮೇಲೆ ದರ್ಪ ತೋರುವ ಬಿಜೆಪಿಗರ ಭಾರತ ಮಾತೆಯನ್ನು ಪೂಜಿಸುವ ನಾಟಕವು ಹಾಸ್ಯಾಸ್ಪದವಾದ ಸಂಗತಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಕುರಿತಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಟ್ವಿಟ್ ಮಾಡಿ, ಸರ್ ದಯವಿಟ್ಟು ಈ ಅಮಾನತು ಸರಿಯಾಗಿದೆಯೇ ಅಥವಾ ತಪ್ಪಾಗಿ ನಡೆದಿದೆಯೇ ಎಂದು ಪರಿಶೀಲಿಸಬಹುದೇ ಎಂದು ಬರೆದುಕೊಂಡು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
Edu mahila adhikari yavarige maduthiruva avamana vagidhe
I support you mam