ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರಿಕೆ, ಮಾತುಕತೆಗೆ ಬನ್ನಿ ಎಂದ ಸಿಎಂ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರಿಯಲಿದ್ದು ಆರ್ಟಿಸಿ ನೌಕರರು ತಮ್ಮ ಹೋರಾಟವನ್ನು ಅನಿರ್ದಿಷ್ಟವಾಗಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೆ ತರುವವರೆಗೆ, ಬೇಡಿಕೆ ಈಡೇರುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಮುಷ್ಕರ ನಡೆಸುತ್ತಿರುವ ಆರ್ಟಿಸಿ ನೌಕರರೊಂದಿಗೆ ಯಾವುದೇ ಮಾತುಕತೆಗಳನ್ನು ತಳ್ಳಿಹಾಕಿದ್ದ ಸರ್ಕಾರ ಬುಧವಾರ ತನ್ನ ನಿಲುವನ್ನು ಮೃದುಗೊಳಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಷ್ಕರವನ್ನು ಕೊನೆಗೊಳಿಸಿ ಮಾತುಕತೆಗೆ ಬರಬೇಕೆಂದು ಸಾರಿಗೆ ನೌಕರರಿಗೆ ಮನವಿ ಮಾಡಿದರು.
“ಸರ್ಕಾರವು ಅವರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಪೂರೈಸಿದೆ ಮತ್ತು ಶೇ 8 ರಷ್ಟು ವೇತನ ಹೆಚ್ಚಳವನ್ನೂ ಘೋಷಿಸಿದೆ. ಈ ಕಠಿಣ ಸಮಯದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸುವುದು ತಪ್ಪು . ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಅವರು ಮುಷ್ಕರವನ್ನು ಕೊನೆಗೊಳಿಸಲಿ ಮತ್ತು ಸರ್ಕಾರದೊಂದಿಗೆ ಮಾತುಕತೆಗೆ ಬರಲಿ ”ಎಂದು ಅವರು ಹೇಳಿದರು.
ಮುಷ್ಕರವನ್ನು ಮುನ್ನಡೆಸಿದ ಕೆಎಸ್ಆರ್ಟಿಸಿ ಎಂಪ್ಲಾಯೀಸ್ ಲೀಗ್ನ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿ ನಡೆಸಿ ಗುರುವಾರ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದರು. “ನಾವು ಸರ್ಕಾರದೊಂದಿಗೆ ಮಾತನಾಡುವುದಿಲ್ಲ ಎಂದು ನಾವು ಎಂದೂ ಹೇಳಿಲ್ಲ. ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಮತ್ತು ಅದು ಮುಂದಿನ ದಾರಿ. ಮುಖ್ಯಮಂತ್ರಿ ಕರೆದಾಗಲೆಲ್ಲಾ ನಾವು ಮಾತುಕತೆಗೆ ಹೋಗುತ್ತೇವೆ, ಆದರೆ ಮುಷ್ಕರ ಮುಂದುವರಿಯುತ್ತದೆ, ”ಎಂದರು.
ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆ ಬಗ್ಗೆ ಪ್ರಶ್ನಿಸಿದಾಗ, ಆ ಪ್ರಶ್ನೆಗೆ ಉತ್ತರಿಸಬೇಕಾಗಿರುವುದು ರಾಜ್ಯ ಸರ್ಕಾರವೇ ಹೊರತು ನಾವಲ್ಲ ಎಂದು ಹೇಳಿದ್ದಾರೆ. ರಾಜ್ಯದ ವಿವಿಧ ಭಾಗಗಳ ವರದಿಗಳ ಪ್ರಕಾರ,ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ. ಪ್ರಯಾಣಿಕರು ಪರದಾಡುವಂತಾಗಿದೆ. ರಾಜಧಾನಿ ಮತ್ತು ಇತರೆಡೆಗಳಲ್ಲಿ, ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದದ್ದು ಕಂಡುಬಂದಿದೆ.
ಬೆಂಗಳೂರು ಮೆಟ್ರೋ ರೈಲು ಪ್ರತಿ ಮಾರ್ಗದಲ್ಲೂ ಕಿಕ್ಕಿರಿದು ತುಂಬಿತ್ತು ಮತ್ತು ಪ್ರಯಾಣಿಕರಿಗೆ ಇಲ್ಲೂ ಸಹ ಕಠಿಣ ಪರಿಸ್ಥಿತಿ ಎದುರಾಗಿತ್ತು. ಏಕೆಂದರೆ ಕೌಂಟರ್ಗಳಲ್ಲಿ ಟಿಕೆಟ್ಗಳು ಮಾರಾಟ ಮಾಡುತ್ತಿಲ್ಲ.ಕಾರ್ಡ್ಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮೌಲ್ಯಗಳಿಗೆ ಮಾರಾಟವಾಗುತ್ತಿರುವುದು ಪತ್ತೆಯಾಗಿದೆ. ಕೋವಿಡ್ ಕಾರಣ, ಕೌಂಟರ್ಗಳಲ್ಲಿ ಟಿಕೆಟ್ ನೀಡುವುದನ್ನು ನಿಲ್ಲಿಸಲಾಗಿದೆ. ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಖಾಸಗಿ ಬಸ್ಸುಗಳನ್ನು ರಸ್ತೆಗಿಳಿಸಿದ್ದರೂ ಕೆಲವೇ ಪ್ರಯಾಣಿಕರು ಅದನ್ನು ಒಪ್ಪಿಕೊಂಡರು. ರಾಜ್ಯದ ಯಾವುದೇ ಭಾಗದಿಂದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಕೆಲವು ಬಸ್ಸುಗಳನ್ನು ಓಡಿಸಲಾಯಿತು.