ಸೆಲ್ಕೋ ಸೋಲಾರ್ನಿಂದ ಸೌರಶಕ್ತಿಯ ವಿನೂತನ ಸಂಚಾರಿ ಶೌಚಾಲಯ ನಿರ್ಮಾಣ
ಕಲಬುರುಗಿ(ಉಡುಪಿ ಟೈಮ್ಸ್ ವರದಿ): ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ ಈ ಅರ್ಥಪೂರ್ಣವಾದ ಸಾಲುಗಳು ಹೇಳುವುವಂತೆ ಎಲ್ಲಿ ಸ್ತ್ರೀಯನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಅದಂತೆ ಸ್ತ್ರೀತನವನ್ನು ಗೌರವಿಸುವ, ಸ್ತ್ರೀಯರ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ರಾಜ್ಯದಲ್ಲಿ ಮಹಿಳೆಯರಿಗಾಗಿ ವಿನೂತನ ವ್ಯವಸ್ಥೆಯೊಂದು ರೂಪುಗೊಂಡಿದೆ.
ಅದುವೇ ಸಂಚಾರಿ ಶೌಚಾಲಯ. ಹೌದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಅನುಕೂಕರವಾಗುವಂತೆ ಹಾಗೂ ಮಹಿಳೆಯರಿಗೆ ಕಂಫರ್ಟ್ ಝೋನ್ ಕಲ್ಪಿಸುವ ನಿಟ್ಟಿನಲ್ಲಿ ಈ ಸಂಚಾರಿ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಸದ್ಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಜಂಟಿ ಸಹಯೋದಲ್ಲಿ ಸೌರಶಕ್ತಿಯಿಂದ ಕೆಲಸ ಮಾಡುವ ವಿನೂತನ ಸಂಚಾರಿ ಶೌಚಾಲಯವನ್ನು ಕಲಬುರುಗಿಯಲ್ಲಿ ಸ್ಥಾಪಿಸಲಾಗಿದೆ.
ಸೆಲ್ಕೋ ತಂಡ ಪೂರ್ತಿ ಬಸ್ ಗೆ ಸೌರಶಕ್ತಿ ಅಳವಡಿಸಿದ್ದು. ಬಸ್ಸಿನೊಳಗೆ ಟ್ಯೂಬ್ ಲೈಟ್ ಗಳು ಫ್ಯಾನ್ ಗಳು, ಎಕ್ಸಾಸ್ಟ್ ಫ್ಯಾನ್ಗಳು ಇವೆ. ಅಲ್ಲದೆ ಈ ಸಂಚಾರಿ ಶೌಚಾಲಯದಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಎರಡೂ ಶೈಲಿಯ ಟಾಯ್ಲೆಟ್ಗಳು ಇದ್ದು, ಚಿಕ್ಕ ಚಿಕ್ಕ ಮಕ್ಕಳಿಗೆ ಎದೆ ಹಾಲು ಉಣಿಸಲು ಒಂದು ಪ್ರತ್ಯೇಕ ಕೋಣೆಯ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಹಳೆಯ ಬಸ್ಗಳನ್ನು ಪರಿವರ್ತಿಸಿ ಈ ಶೌಚಾಲಯ ರೂಪುಗೊಳಿಸಲಾಗಿದ್ದು, ಈ ಪೂರ್ತಿ ಯೋಜನೆಯನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಂ.ಡಿ ಕುರ್ಮಾ ರಾವ್, ಅವರ ಮಾರ್ಗದರ್ಶನದಲ್ಲಿ ಅನುಷ್ಟಾನಗೊಂಡಿದೆ.
ಸದ್ಯ ಈ ಸಂಚಾರಿ ಶೌಚಾಲಯದ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಮಾದರಿಯ ಶೌಚಾಲಯಗಳು ಕಲಬುರುಗಿ ಮಾತ್ರವಲ್ಲದೆ ರಾಜ್ಯಾದ್ಯಂತ ಅನುಷ್ಟಾನಕ್ಕೆ ಬರುವಂತೆ ಆಗಬೇಕು ಎಂಬ ಮಾತುಗಳೂ ಕೇಳಿ ಬರುತ್ತಿವೆ.