ನಾನು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ, ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ: ಈಶ್ವರಪ್ಪ

ಬೆಂಗಳೂರು: ನನ್ನ ಜೀವನದಲ್ಲಿ ನಾನು ಎಂದಿಗೂ ಸ್ಫೋಟವಾಗುವುದಿಲ್ಲ. ಸತ್ಯ ಕಂಡಾಗ ಮುನ್ನುಗುತ್ತೇನೆ. ಯಾರ ಕತ್ತು ಕೊಯ್ದು ದಾರಿ ತಪ್ಪುವುದಿಲ್ಲ ಎಂದು ಹೇಳಿದ್ದು ಬೇರಾರು ಅಲ್ಲ, ಆಗಾಗ ಮಾರ್ಮಿಕವಾಗಿ ನುಡಿದ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಸಮಧಾನ ವ್ಯಕ್ತಪಡಿಸುವ ಸಚಿವ ಕೆ.ಎಸ್.ಈಶ್ವರಪ್ಪ.

ನಗರದಲ್ಲಿಂದು ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯಾವುದೇ ಕಾರಣಕ್ಕೂ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ. ಮುಂದೆಯೂ ಅವರ ವಿರುದ್ಧ ದೂರು ಕೊಡುವುದಿಲ್ಲ. ರಾಜ್ಯಪಾಲ ವಿಆರ್ ವಾಲಾ ಅವರು ಗುಜರಾತ್ ರಾಜ್ಯದಲ್ಲಿ ಆರ್ಥಿಕ ಸಚಿವರಾಗಿದ್ದವರು. ಹೀಗಾಗಿ ಇಲಾಖೆಯ ಆರ್ಥಿಕತೆ ಅನುದಾನದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಅವರ ಬಳಿ ಹೋಗಿದ್ದೆ ಹೊರತು ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿಲ್ಲ. ಮುಂದೆಯೂ ಕೊಡುವುದಿಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ ರವಿ, ಪಕ್ಷದ ನಾಯಕರು. ಹೀಗಾಗಿ ಅವರ ಗಮನಕ್ಕೆ ಇಲಾಖೆಯ ವಿಚಾರವನ್ನು ತಂದಿದ್ದೆ. ಪಕ್ಷದ ನಾಯಕರ ಗಮನಕ್ಕೆ ತರದೇ ಪ್ರತಿಪಕ್ಷದ ಹೆಚ್.ಡಿ.ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಕೊಡಲು ಆಗುತ್ತದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಈಶ್ವರಪ್ಪ, ಅಮಿತ್ ಶಾ, ಸಿ.ಟಿ ರವಿ, ಅರುಣ್ ಸಿಂಗ್ ಎಲ್ಲರೂ ಬಿಜೆಪಿ ಪಕ್ಷದ ಕುಟುಂಬ ಸದಸ್ಯರೇ. ಕುಟುಂಬ ಎಂದು ಪರಿಗಣಿಸಿದಾಗ ಸಹಜವಾಗಿಯೇ ಇಲಾಖೆಯಲ್ಲಿನ ಬೆಳವಣಿಗೆ ವಿಷಯದ ಬಗ್ಗೆ ಅವರುಗಳ ಗಮನಕ್ಕೆ ತಂದಿದ್ದೇನೆಯೇ ಹೊರತು ಯಾರಿಗೂ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿಲ್ಲ. ಬೇರೆ ಇಲಾಖೆಯಲ್ಲಿ ನೇರವಾಗಿ ಸಿಎಂ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಆದರೆ ಹಣ ಬಿಡುಗಡೆ ಮಾಡಬಹುದು ಎಂದು ಮತ್ತೆ ಸೂಚ್ಯವಾಗಿ ಹೇಳಿದ ಈಶ್ವರಪ್ಪ ಈ ಬಗ್ಗೆ ಹೆಚ್ಚು ಚರ್ಚೆಯ ಅವಶ್ಯಕತೆಯಾಗಲೀ ಮಾತಾಗಲೀ ಬೇಡ ಎಂದರು.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಈಶ್ವರಪ್ಪ, ಕಟ್ಟು ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ ಪ್ರವೀಣರು. ಇವರು ಕಟ್ಟುವ ಕಟ್ಟುಕಥೆಗೆ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನೋ ಅಥವಾ ನೊಬೆಲ್ ಪ್ರಶಸ್ತಿಯನ್ನೋ ಕೊಡಬೇಕು. ಸದ್ಯಕ್ಕೆ ಸಿದ್ದರಾಮಯ್ಯಗೆ ಏನೂ ಉದ್ಯೋಗವಿಲ್ಲ. ಹೀಗಾಗಿ ಕಥೆ ಕಟ್ಟುವುದರಲ್ಲಿ ನಿರತರಾಗಿದ್ದಾರೆ ಎಂದು ಕುಟುಕಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬುದ್ಧಿ ಹೇಳಿದ ಈಶ್ವರಪ್ಪ, ಯತ್ನಾಳ್ ಏನೇ ಇದ್ದರೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು. ಏನೇ ಬೈಯುವುದಾದರೂ ಅದಕ್ಕೆ ಸೂಕ್ತವಾದ ದಾಖಲೆ ಕೊಟ್ಟು ಮಾತನಾಡಬೇಕು. ಸುಮ್ಮಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರ ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸವಿದೆ. ಈಗಲೂ ಯಡಿಯೂರಪ್ಪರೇ ನಾಯಕರು ಎಂದರು.

Leave a Reply

Your email address will not be published. Required fields are marked *

error: Content is protected !!