ಸಾರಿಗೆ ನೌಕರರ 6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ, ಮಾತುಕತೆಗೆ ಬನ್ನಿ: ಮುಷ್ಕರ ನಿರತರಿಗೆ ಸಿಎಂ ಮನವಿ

ಬೆಳಗಾವಿ: ಬುಧವಾರದಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ ತಾಲೂಕಿನ ಮುತ್ನಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಸಾರಿಗೆ ನೌಕರರ ಒಂಬತ್ತು ಬೇಡಿಕೆಯಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಲಾಕ್ ಡೌನ್ ಸಮಯದಲ್ಲಿಯೂ ಸಾರಿಗೆ ನೌಕರರಿಗೆ ಸಂಪೂರ್ಣ ಸಂಬಳ ನೀಡಿದ್ದೇವೆ, ಸರ್ಕಾರದಿಂದಲೇ 1,200 ಕೋಟಿ ರೂಪಾಯಿ ಸಂಬಳ ಸಾರಿಗೆ ಇಲಾಖೆಗೆ ಈಗಾಗಲೇ ಕೊಟ್ಟಿದ್ದೇವೆ. ಸರಕಾರ ಪ್ರಯತ್ನವನ್ನು ಸಾರಿಗೆ ನೌಕರರು ಕೂಡಾ ಪರಿಗಣಿಸಬೇಕು ಎಂದು ಹೇಳಿದರು.

ಸರಕಾರ ಈಗಾಗಲೇ ಎಂಟು ಬೇಡಿಕೆ ಈಡೇರಿಸಿದ ಮೇಲೂ ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ, ಯಾರದ್ದೋ ಪ್ರೇರಣೆ, ಒತ್ತಡದ ಮೇಲೆ ಮುಷ್ಕರ ಮಾಡುತ್ತಿದ್ದಾರೆ ಎನಿಸುತ್ತಿದೆ. ದಯಮಾಡಿ ಹಠವನ್ನು ಬಿಡಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ ಸರ್ಕಾರ ಸಾರಿಗೆ ಇಲಾಖೆ ನೌಕರರ ಪರವಾಗಿದೆ. ಕೊರೋನಾದಿಂದ ಇಲಾಖೆ ನಷ್ಟದಲ್ಲಿದೆ, ಸರ್ಕಾರಕ್ಕೆ ಸಹಕಾರ ನೀಡಿ, ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ, ಕುಳಿತು ಚರ್ಚೆ ನಡೆಸೋಣ, ಶ್ರೀಮಾನ್ಯರಿಗೆ ತೊಂದರೆ ಕೊಡಬೇಡಿ ಎಂದು ಮುಷ್ಕರ ನಿರತರಲ್ಲಿ ಸಿಎಂ ಮನವಿ ಮಾಡಿಕೊಂಡರು.

ವೇತನ ಆಯೋಗ ಶಿಫಾರಸು ಸಾಧ್ಯವಿಲ್ಲ: 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ, ಶೇಕಡಾ 8ರಷ್ಟು ಹೆಚ್ಚುವರಿಯಾಗಿ ಸಾರಿಗೆ ನೌಕರರಿಗೆ ಸಂಬಳ ಕೊಡಲು ನಾವು ಭರವಸೆ ನೀಡಿದ್ದು ಅದನ್ನು ಈಡೇರಿಸುತ್ತೇವೆ ಎಂದು ಸಹ ಸಿಎಂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!