ಸಾರಿಗೆ ನೌಕರರ ಮುಷ್ಕರಕ್ಕೆ ಬಿಗ್ ಶಾಕ್: ಮಾರ್ಚ್ ತಿಂಗಳ ವೇತನ ಬಿಡುಗಡೆಗೆ ತಡೆ?
ಹುಮ್ನಾಬಾದ್: ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸಬೇಡಿ, ಅದರಿಂದ ನಾಳೆ ನಿಮಗೇ ತೊಂದರೆಯಾಗುತ್ತದೆ, ಮುಷ್ಕರ ನಿಲ್ಲಿಸಿ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿದ್ದು, ವೇತನ ಹೆಚ್ಚಿಸಲು ನಾವು ಸಿದ್ದರಿದ್ದೇವೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವನ್ನು ಸಹ ಕೇಳಿಕೊಂಡಿದ್ದೇವೆ, ಸದ್ಯದಲ್ಲಿಯೇ ವೇತನ ಹೆಚ್ಚಿಸಲಾಗುವುದು, ನೀವು ಮುಷ್ಕರ ನಡೆಸಿದರೆ ಇಲಾಖೆಗೆ ನಷ್ಟವಾಗಿ ವೇತನ ನೀಡಲು ಮತ್ತಷ್ಟು ಕಷ್ಟವಾಗುತ್ತದೆ, ಹಾಗಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.
ಸಾರಿಗೆ ಇಲಾಖೆ ನೌಕರರನ್ನು ಮುಷ್ಕರ ಮಾಡಿಸಲೇಬೇಕೆಂದು ಮಾಡಿಸುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂದು ಮುಂದೆ ಗೊತ್ತಾಗುತ್ತದೆ. ಯಾರದ್ದೋ ಮಾತು ಕೇಳಬೇಡಿ, ಇಂದು ಮುಷ್ಕರ ನಿಲ್ಲಿಸಿ ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಿ ಎಂದು ನೌಕರರನ್ನು ಕೇಳಿಕೊಂಡರು.
ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಖಾಸಗಿ ಬಸ್ಸು ನಿರ್ವಾಹಕರಲ್ಲಿ ಓಡಾಡಕ್ಕೆ ಕೇಳಿಕೊಂಡಿದ್ದು, ಖಾಸಗಿ ಬಸ್ಸುಗಳನ್ನು ನಿಲ್ಲಿಸಲು ಜಾಗವನ್ನು ನೀಡಿ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಸರ್ಕಾರ ಸಾರಿಗೆ ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ಸರ್ಕಾರ ಎಂದೆಂದಿಗೂ ತಮ್ಮ ಜೊತೆಗಿದ್ದು, ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸುತ್ತಿದ್ದೇನೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸರ್ಕಾರದಿಂದ ಪ್ರತಿ ಕೌಂಟರ್: ಇನ್ನೊಂದೆಡೆ ಮುಷ್ಕರ ನಿರತ ಸಾರಿಗೆ ನೌಕರರ ಮುಷ್ಕರಕ್ಕೆ ಬಿಗ್ ಶಾಕ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ನೌಕರರ ಮಾರ್ಚ್ ತಿಂಗಳ ವೇತನ ಬಿಡುಗಡೆಗೆ ತಡೆಹಿಡಿಯಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸಾರಿಗೆ ಇಲಾಖೆ ನೌಕರರಿಗೆ ಪ್ರತಿ ತಿಂಗಳು 5ರಿಂದ 10ರೊಳಗೆ ವೇತನ ನೀಡಲಾಗುತ್ತಿದ್ದು, ಈ ಬಾರಿ ವೇತನ ತಡೆಹಿಡಿಯಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರ ಈ ತೀರ್ಮಾನ ಕೈಗೊಂಡರೆ ಮುಷ್ಕರ ನಿರತ ನೌಕರರು ಏನು ಮಾಡಲಿದ್ದಾರೆ, ಅವರ ಮುಷ್ಕರ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲವಾಗಿದೆ