ಪೊಲೀಸ್ ಸೇವೆಗೆ ಸೇರುವ ಮೊದಲು ಹೊಂದಿರುವ ಮನೋಭಾವನೆ ಬಳಿಕ ಬದಲಾಗುತ್ತದೆ: ಜಿಲ್ಲಾಧಿಕಾರಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಯಾರು ಯಾವುದೇ ಕರ್ತವ್ಯ ಮಾಡಲಿ. ನಾವು ಮಾಡುವ ಕೆಲಸವೇ ಅತ್ಯುನ್ನತ ಕೆಲಸ ಎನ್ನುವ ಮನೋಭಾವನೆಯನ್ನು ಹೊಂದಿ, ಕರ್ತವ್ಯದಲ್ಲಿ ಶ್ರೇಷ್ಠತೆಯನ್ನು ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಉಡುಪಿಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 12 ನೇ ತಂಡದ ಕೆಎಸ್ ಐ ಎಸ್ ಎಫ್ ಪೊಲೀಸ್ ಕಾನ್ ಸ್ಟೇಬಲ್ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಸಿ ಮಾತನಾಡಿದ ಅವರು, ಭಾರತದ ಸಂವಿಧಾನದ 10ನೇ ಮೂಲಭೂತ ಕರ್ತವ್ಯ ಹೇಳುವಂತೆ ಯಾವುದೇ ಕೆಲಸ ಮಾಡಿದರೂ ಶ್ರೇಷ್ಠ ರೀತಿಯಲ್ಲಿ ಮಾಡಬೇಕು. ಸಂವಿಧಾನದ ಈ ಕರ್ತವ್ಯವನ್ನು ನೆನಪಿನಲ್ಲಿಟ್ಟು ನಿಮ್ಮ ಕರ್ತವ್ಯದಲ್ಲಿ ಶ್ರೇಷ್ಠತೆಯನ್ನು ಪಡೆಯುವ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಆಗಲಿ ಎಂದು ಕೆಎಸ್ ಐಎಸ್ ಎಫ್ ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಶುಭ ಹಾರೈಸಿದರು.
ಪೊಲೀಸ್ ಇಲಾಖೆ ಯಾವುದೇ ಸಂದರ್ಭದಲ್ಲಿ ನಮ್ಮ ಜೊತೆ ಇರುತ್ತದೆ ಎನ್ನುವ ನಂಬಿಕೆಯಿಂದ ನಾವು ನಿರಾತಂಕವಾಗಿ ಯಾವುದೇ ಕೆಲಸವನ್ನು ಮಾಡುತ್ತೇವೆ. ಅದಂತೆ ಜಿಲ್ಲೆಯ ಪೊಲೀಸ್ ಇಲಾಖೆ ಯಾವುದೇ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ನೆರವಾಗುತ್ತಿದೆ. ಪೊಲೀಸ್ ಇಲಾಖೆ ಜೊತೆಗೆ ಎಲ್ಲಾ ಇಲಾಖೆಗಳೂ ಕೈಜೋಡಿಸಿ ಒಂದಾಗಿ ಕೆಲಸ ಮಾಡಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾದ್ಯವಾಗುತ್ತದೆ. ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಭದ್ರತಾ ಭಾವ ಬರುವಂತೆ, ಜಿಲ್ಲೆಯ ಜನತೆಯ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪೊಲೀಸ್ ಇಲಾಖಾ ತಂಡವನ್ನು ಅಭಿನಂದಿಸಿದರು.
ಇದೇ ವೇಳೆ ಮಾತು ಮುಂದುವರೆಸಿದ ಅವರು, ಹಲವಾರು ಮಂದಿಯಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರುವ ಮೊದಲು ಹೊಂದಿರುವ ಮನೋಭಾವನೆ ಸೇವೆ ಸೇರಿದ ಬಳಿಕ ಬದಲಾಗುತ್ತದೆ. ಆದರೆ, ಸರ್ವಿಸ್‍ಗೆ ಸೇರುವ ಮೊದಲು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತೇವೆ ಅಂದುಕೊಳ್ಳುವ ನಮ್ಮ ಮನೋಭಾವ ಏನಿರುತ್ತದೋ ಅದು ಸೇವೆಗೆ ಸೇರಿದ ಬಳಿಕವೂ ಅದೇ ರೀತಿ ಸೇವೆ ಮುಂದುವರೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ನಿಮ್ಮ ಸೇವೆಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುವಾಗ ಉತ್ತಮ ಸೇವೆ ಮಾಡಿದ್ದೇನೆ ಎಂಬ ಸಂತೃಪ್ತಿ ಹೊಂದುವಂತೆ ಆಗಲಿ ಎಂದು ಕಾನ್‍ಸ್ಟೇಬಲ್‍ಗಳಿಗೆ ಹಾರೈಸಿದರು.
ಕಾರ್ಯಕ್ರಮದಲ್ಲಿ 12ನೇ ತಂಡದ 95 ಕೆಎಸ್ ಐ ಎಸ್ ಎಫ್ ಪೊಲೀಸ್ ಕಾನ್ ಸ್ಟೇಬಲ್ ಗಳ ನಿರ್ಗಮನ ಪಥ ಸಂಚಲನ ನಡೆಯಿತು. ಈ ಸಂದರ್ಬ ಅಪಾರ ಜಿಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.