ಉಡುಪಿ, ದ.ಕ ಜಿಲ್ಲೆಗೆ ತಟ್ಟದ ಸಾರಿಗೆ ನೌಕರರ ಮುಷ್ಕರ-ಜನಜೀವನ ಎಂದಿನಂತೆ
ಉಡುಪಿ: (ಉಡುಪಿ ಟೈಮ್ಸ್ ವರದಿ)ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಬಸ್ ಬಂದ್ಗೆ ಕರಾವಳಿ ಜಲ್ಲೆಯಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ಉಭಯ ಜಿಲ್ಲೆಗಳಲ್ಲಿ ಪ್ರಯಾಣಿಕರು ಸರ್ಕಾರಿ ಬಸ್ ಗಳಿಗಿಂತ, ಖಾಸಗಿ ಬಸ್ ಗಳನ್ನೇ ಹೆಚ್ಚಾಗಿ ಅವಲಂಭಿಸಿರುವುದರಂದ ಬಂದ್ನ ಬಿಸಿ ಜಿಲ್ಲೆಗಳಿಗೆ ತಟ್ಟಿಲ್ಲ. ಜಿಲ್ಲೆಗಳಲ್ಲಿ ಸಾರಿಗೆ ಬಸ್ಗಳು ರಸ್ತೆಗೆ ಇಳಿದಿಲ್ಲವಾದರೂ ಜನಜೀವನ ಎಂದಿನಂತೆ ನಡೆಯುತ್ತಿದೆ.
ಇನ್ನು ಉಡುಪಿ ಜಿಲ್ಲೆಯ ಉಡುಪಿ ನಗರದ ಡಿಪ್ಪೋದಲ್ಲಿ 108, ಕುಂದಾಪುರ ಡಿಪ್ಪೋದಲ್ಲಿ 120 ಕೆಎಸ್ಆರ್ಟಿಸಿ ಬಸ್ಗಳಿದ್ದು ಯಾವುದೇ ಬಸ್ಗಳು ರಸ್ತೆಗಿಳಿದಿಲ್ಲ. ಅಲ್ಲದೆ 380 ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇನ್ನು ಬಸ್ ಬಂದ್ ಹಿನ್ನಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಡಿಪ್ಪೋಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಹೊರ ಜಿಲ್ಲೆಗೆ ಹೋಗುವ ಪ್ರಯಾಣಿಕರು ಬಸ್ ಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಕಾದು ಕುಳಿತಿರುವ ದೃಶ್ಯಗಳು ಕಂಡು ಬಂದಿತ್ತಾದರೂ ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಉಡುಪಿಯಿಂದ ಶಿವಮೊಗ್ಗ, ಕಾರ್ಕಳ, ಮೂಡಬಿದಿರೆ ಮಾರ್ಗವಾಗಿ ಖಾಸಗಿ ಬಸ್ಗಳನ್ನು ಬಿಟ್ಟಿದ್ದು, ಬಂದ್ ಮುಂದುವರೆದರೆ ಪರಿಸ್ಥಿತಿಯನ್ನು ಗಮನಿಸಿ ನಾಳೆ ಹೆಚ್ಚುವರಿ ಖಾಸಗಿ ಬಸ್ಗಳನ್ನು ರಸ್ತೆಗಿಳಿಸಲಾಗುವುದು ಎಂದು ಉಡುಪಿ ಡಿಪ್ಪೋ ಮ್ಯಾನೇಜರ್ ಉದಯ್ ಶೆಟ್ಟಿ ತಿಳಿಸಿದ್ದಾರೆ.