ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ಸು ಓಡಾಟ, ಪ್ರಯಾಣಿಕರಿಗೆ ತಟ್ಟಿದ ಬಂದ್ ಬಿಸಿ
ಬೆಂಗಳೂರು: ವೇತನ ಪರಿಷ್ಕರಣೆಯತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾಂಭಿಸಿದ್ದಾರೆ.
ಇದರಿಂದಾಗಿ ಇಂದು ರಾಜ್ಯ ರಸ್ತೆ ಸಾರಿಗೆಗಳು ಬಹುತೇಕ ಕಡೆಗಳಲ್ಲಿ ರಸ್ತೆಗಿಳಿದಿಲ್ಲ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಬಸ್ ಸಂಚಾರ ಸ್ತಬ್ಧವಾಗಿದೆ. ಜನರು ದಿನನಿತ್ಯದ ವಹಿವಾಟುಗಳಿಗೆ, ಕಾರ್ಯಗಳಿಗೆ ಬಸ್ ಗಳನ್ನೇ ಸಂಚಾರಕ್ಕೆ ನಂಬಿಕೊಂಡಿದ್ದವರು ತಮ್ಮ ಊರುಗಳಿಗೆ ತೆರಳಲು ಸಂಕಷ್ಟ ಎದುರಿಸಬೇಕಾಯಿತು .
ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಖಾಸಗಿ ಬಸ್ಸುಗಳು ಇಂದು ರಸ್ತೆಗಳಲ್ಲಿ ಹೆಚ್ಚಾಗಿ ಓಡಾಡಿಕೊಂಡಿದ್ದು, ಪರಿಸ್ಥಿತಿಯ ಲಾಭವನ್ನು ಖಾಸಗಿ ಬಸ್ಸುಗಳ ಮಾಲೀಕರು ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುವುದು, ಕೆಲವೆಡೆ ಪ್ರಯಾಣಿಕರಿಂದ ದರ ಸುಲಿಗೆ ಮಾಡುವುದು ಕಂಡುಬರುತ್ತಿದೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 20 ಸಾವಿರ ಸಾರ್ವಜನಿಕ ಬಸ್ಸುಗಳು ಓಡಾಡುತ್ತಿದ್ದು, ಸುಮಾರು 1 ಕೋಟಿ ಪ್ರಯಾಣಿಕರು ಅದನ್ನು ಪ್ರಯಾಣಕ್ಕೆ ನೆಚ್ಚಿಕೊಂಡಿದ್ದಾರೆ. ಆದರೆ ಇಂದು ಸಾರ್ವಜನಿಕರಿಗೆ ಸಾರಿಗೆ ಬಸ್ಸುಗಳು ಇಲ್ಲದೆ ಖಾಸಗಿ ಬಸ್ಸುಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಹಲವು ಕಡೆಗಳಲ್ಲಿ ಖಾಸಗಿ ಬಸ್ಸುಗಳ ನಿರ್ವಾಹಕರು ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುತ್ತಿರುವುದು ವರದಿಯಾಗಿದೆ.
ಪರೀಕ್ಷೆ ಮುಂದೂಡಿಕೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವ ವಿದ್ಯಾಲಯ ಹಾಗೂ ಮಂಗಳೂರು ವಿಶ್ವ ವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಇಂದು ನಡೆಸಲು ಉದ್ದೇಶಿಸಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿವೆ ಎಂದು ವಿಶ್ವವಿದ್ಯಾಲಯಗಳ ಪ್ರಕಟಣೆ ತಿಳಿಸಿದೆ.
ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಇಂದು ಮುಷ್ಕರ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಮೆಟ್ರೋ ಸಂಸ್ಥೆ ತೀರ್ಮಾನಿಸಿದೆ. ಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನ ನಿಲ್ದಾಣದಿಂದ ಬಸ್ಸುಗಳ ಸಂಚಾರ: ಆದರೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಲವು ಕಡೆಗಳಿಗೆ ಇಂದು ಬೆಳಗ್ಗೆ ಬಸ್ಸುಗಳ ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿರುವುದು ಕಂಡುಬರುತ್ತಿದೆ. ಇಂದು ಬೆಳಗ್ಗೆಯಿಂದ ವಾಯುವಜ್ರ ಸಾರಿಗೆ ಬಸ್ಸು ಎಂದಿನಂತೆ ಸಂಚರಿಸುತ್ತಿರುವುದು ಕಂಡುಬಂತು.
ಲಾಕ್ ಡೌನ್ ಸಮಯದಲ್ಲಿ ನಮಗೆ ಅನ್ನ ಕೊಟ್ಟಿದೆ ಸಂಸ್ಥೆ: ಆದರೆ ಇಂದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ತ್ಯಾಗರಾಜ್ ಎಂಬ ಚಾಲಕ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು ಕಂಡುಬಂತು. ಲಾಕ್ ಡೌನ್ ಸಮಯದಲ್ಲಿ 3 ತಿಂಗಳು ಸಂಸ್ಥೆ ನಮಗೆ ವೇತನ ಕೊಟ್ಟು ಅನ್ನ ಹಾಕಿದೆ. ಸಾರ್ವಜನಿಕ ಸಾರಿಗೆಯಾಗಿರುವುದರಿಂದ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ. ಇವತ್ತಿನ ಡ್ಯೂಟಿ ವೇಳೆ ನಮಗೆ, ಬಸ್ಸಿಗೆ ಏನೇ ಹಾನಿಯಾದರೂ ಕೂಡ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚಂದ್ರು ಅವರೇ ಹೊಣೆ ಎಂದು ತ್ಯಾಗರಾಜ್ ಹೇಳಿದ್ದಾರೆ.
ಮುಷ್ಕರ ಏಕೆ: 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ತಮಗೆ ರಾಜ್ಯ ಸರ್ಕಾರ ವೇತನ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕೂ ನಿಗಮದ ಸುಮಾರು 1.30 ಲಕ್ಷ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಆದರೆ ಸಾರ್ವಜನಿಕರಿಗೆ ಪ್ರಯಾಣಕ್ಕೆ ತೊಂದರೆಯಾಗಬಾರದೆಂದು ಸಾರಿಗೆ ಇಲಾಖೆ ಬದಲಿ ವ್ಯವಸ್ಥೆಯನ್ನು ಮಾಡುತ್ತಿದೆ. ಬದಲಿ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಮಾಡಲಾಗಿದೆ. ಖಾಸಗಿ ಬಸ್ಸುಗಳು ಮತ್ತು ಮಿನಿ ಬಸ್ಸುಗಳ ಓಡಾಟಕ್ಕೆ ನಾವು ಕೇಳಿದ್ದೇವೆ. ಮುಷ್ಕರ ಸಂದರ್ಭದಲ್ಲಿ ಈ ಬಸ್ಸುಗಳು ಓಡಾಡಲಿವೆ. ಮುಷ್ಕರದಿಂದ ಕೆಲಸಕ್ಕೆ ಹೋಗುವವರಿಗೆ ಮತ್ತು ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು. ಸಾಧ್ಯವಾದಷ್ಟು ಮಟ್ಟಿಗೆ ಬದಲಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಮುಷ್ಕರಕ್ಕೆ ಕ್ಯಾಬ್ ಗಳ ಬೆಂಬಲ: ಬಿಎಂಟಿಸಿ ಬದಲಿಗೆ ಬೆಂಗಳೂರು ನಗರದಲ್ಲಿ ಖಾಸಗಿಯಾಗಿ 2 ಸಾವಿರ ಬಸ್ಸುಗಳು ಇಂದಿನಿಂದ ಸಂಚರಿಸಲಿವೆ. ಕೆಎಸ್ ಆರ್ ಟಿಸಿ, ಎನ್ ಇಕೆಆರ್ ಟಿಸಿ ಮತ್ತು ಎನ್ ಡಬ್ಲ್ಯುಕೆಆರ್ ಟಿಸಿ ಬಸ್ಸುಗಳನ್ನು ಬಳಸುವ ಪ್ರಯಾಣಿಕರಿಗೆ ಎಸ್ ಎಂಎಸ್ ಮೂಲಕ ಬದಲಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ನಾವು ನೈತಿಕವಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸುತ್ತೇವೆ. ಆದರೆ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಎಲ್ಲಾ ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಒಲಾ ಮತ್ತು ಉಬರ್ ಟ್ಯಾಕ್ಸಿ ಚಾಲಕರ ಒಕ್ಕೂಟ ತಿಳಿಸಿದೆ.