ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆಗಳ ಕೊರತೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ-ಹಿರಿಯ ಜೀವಕ್ಕೆ ಬೇಕಿದೆ ಆಸರೆ

ಉಡುಪಿ (ಉಡುಪಿ ಟೈಮ್ಸ್ ವರದಿ) : 8 ತಿಂಗಳ ಹಿಂದೆ ಮೂಳೆ ಮುರಿತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ವೃದ್ದೆಯೊಬ್ಬರಿಗೆ ಆಶ್ರಯದ ನೆರವಿನ ಅಗತ್ಯವಿದ್ದು ಇವರ ನೆರವಿಗೆ ಸಹಕರಿಸುವಂತೆ ಸಾಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಶಿರಿಯಾರ ಕಾಜರವಳ್ಳಿಯ ವೃದ್ಧೆ “ನರ್ಸಿ ಮರಕಾಲ್ತಿ” ಅವರು ಎಂಟು ವರ್ಷಗಳ ಹಿಂದೆ ಮೂಳೆ ಮುರಿತಗೊಂಡು, ಸೊಂಟದ ಸ್ವಾಧೀನವನ್ನು ಕಳೆದುಕೊಂಡಿದ್ದರು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು, ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅವರ ದೈಹಿಕ ಸ್ಥಿತಿ ಗಂಭೀರವಾಗಿತ್ತು, ಅಲ್ಲದೆ  ನಡೆದಾಡಲು ಶಕ್ತರಾಗಲು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾದ ಅನಿವಾರ್ಯತೆ ಇತ್ತು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲು ಸೂಕ್ತ ವ್ಯವಸ್ಥೆಗಳಿಲ್ಲದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಆದರೆ 75 ವರ್ಷದ ಇವರಿಗೆ ಯಾವುದೇ ಆಶ್ರಯವಿಲ್ಲದ ಕಾರಣ ಅಸಹಾಯಕರಾಗಿ ಚಿಂತಾಜನಕ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದಲ್ಲಿಯೇ ನೋವು ಅನುಭವಿಸುತ್ತ ಎಂಟು ತಿಂಗಳುಗಳನ್ನು ಕಳೆದಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೃದ್ಧೆಯ ಯೋಗಕ್ಷೇಮ ವಿಚಾರಿಸಿ ನೆರವಿನ ಭರವಸೆ ನೀಡಿದೆ ಅದರಂತೆ,  ಆರ್ಥಿಕವಾಗಿ ಶಕ್ತನಲ್ಲದಿದ್ದರೂ ನಾನು ಸಾಲ ಮಾಡಿ ವೃದ್ಧೆಗೆ ತಾನು ಚಿಕಿತ್ಸೆ ನೀಡಲು ನಿರ್ಧರಿಸಿದೆ. ಕಳೆದ ಮಹಿಳಾ ದಿನಾಚರಣೆಯ ಶುಭದಿನದಂದು ವೃದ್ಧೆಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅಂಬಲಪಾಡಿ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಲಾಗಿತ್ತು. ಆಸ್ಪತ್ರೆಯಲ್ಲಿ ಡಾ. ಉಮೇಶ್ ಪ್ರಭು ಅವರ ತಂಡವು ವೃದ್ಧೆಯ ಮೇಲೆ ಕಾಳಜಿ ತೋರಿ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದರು.

ಇದೀಗ ಶಸ್ತ್ರ ಚಿಕಿತ್ಸೆ ಪಡೆದಿರುವ ವೃದ್ಧೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ದಿನ ನಿಗದಿಪಡಿಸಲಾಗಿದೆ. ವೃದ್ಧೆಗೆ ನಾಲ್ಕು ತಿಂಗಳುಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದು, ಇದರೊಂದಿಗೆ ನಂತರದ ದಿನಗಳಲ್ಲಿ ಅವರಿಗೆ ಆಶ್ರಯದ ಅವಶ್ಯಕತೆ ಇದೆ. ಆದರೆ ವೃದ್ದೆಗೆ ಸಂಬಂಧಿಸಿದವರು ಯಾರೂ ಇಲ್ಲದ ಕಾರಣ ಅವರಿಗೆ ದಾರಿ ಕಾಣದಂತಾಗಿದೆ. ಆದ್ದರಿಂದ ವೃದ್ದೆಗೆ ನೆರವಿನ ಅಗತ್ಯವಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಇಲಾಖೆಗಳು ವೃದ್ಧೆಯ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ಮಾತು ಮುಂದುವರೆಸಿದ ಅವರು, ನಾಗರಿಕ ಸಮಾಜದಲ್ಲಿ ಕಟ್ಟ ಕಡೆಯ ನಾಗರಿಕನ ಬದುಕು ದುರಂತಮಯ ಆಗುತ್ತಿರುವುದು ಕಂಡುಬರುತ್ತಿದೆ. ಪ್ರತಿದಿನವು ಹಿಂಸೆ, ನೋವು, ಅಸಹಾಯಕತೆ ಮೊದಲಾದ ಕಾರಣಗಳಿಂದ ನೂರಾರು ಜನರು ಜೀವಂತವಾಗಿ ಸಾಯುತ್ತಿದ್ದಾರೆ. ಸಮಾಜದಲ್ಲಿ ಉದ್ಭವಿಸುವ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಲು ಇಲಾಖೆಗಳು ಇವೆ. ಅಧಿಕಾರಿಗಳು ಇದ್ದಾರೆ. ಸರಕಾರವು ವೇತನವನ್ನೂ ನೀಡುತ್ತಿದೆ. ಆದರೆ ಪ್ರಾಮಾಣಿಕ ಕರ್ತವ್ಯಪ್ರಜ್ಞೆ ಇರುವ ಅಧಿಕಾರಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಪರ್ಯಾಸ.

ಈ ಎಲ್ಲಾ ಅವ್ಯವಸ್ಥೆಯ ವಿಚಾರಗಳ ಬಗ್ಗೆ ನೂರಾರು ಉದಾಹರಣೆಗಳು ಕಣ್ಣಮುಂದಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ವಿಚಾರಗಳಲ್ಲಿ ಗಮನಹರಿಸಬೇಕಾಗಿದೆ. ದಿಕ್ಕಿಲ್ಲದ ಹಿರಿಯ ಜೀವ ನರ್ಸಿ ಮರಕಾಲ್ತಿ ಅವರ ಬದುಕಿಗೊಂದು ತಕ್ಷಣ ಸುರಕ್ಷಿತ ನೆಲೆ ಕಲ್ಪಿಸಬೇಕಗಿದೆ. ನರ್ಸಿ ಮರಕಾಲ್ತಿ ಅಂತವರು ಅಸಹಾಯಕತೆಯಿಂದ ಚಿಕಿತ್ಸೆ ಪಡೆಯದೆ ನೂರಾರು ಮಂದಿ ಮನೆಯಲ್ಲಿ ಮಲಗಿದ್ದಲ್ಲಿ ದಿನಗಳ ಕಳೆಯವರು ನೂರಾರು ಮಂದಿ ಇದ್ದಾರೆ. ಸರಕಾರವು ಇಂತಹವರನ್ನು ಗಮನಿಸಿ ವಿಶೇಷ ಪ್ರಕರಣ ಎಂದು ಗಣನೆಗೆ ತೆಗೆದು ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!