ಬೆಳಗಾವಿ: ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಪಾಳಯ ಸೇರಿದ ಲಖನ್!
ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ರಾಜಕೀಯ ದ್ವೇಷ ತಾರಕಕ್ಕೇರಿದ್ದು,ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸ್ಪರ್ದಿಸಿದ್ದಾರೆ, ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ರಮೇಶ್, ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ ಒಗ್ಗಟ್ಟಾಗಿದ್ದಾರೆ.
ಸತೀಶ್ ಜಾರಕಿಹೊಳಿ ಬಲಗೈ ಬಂಟನಾಗಿದ್ದ ಸಹೋದರ ಲಖನ್ ಜಾರಕಿಹೊಳಿ ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಪಾಳೇಯ ಸೇರಿದ್ದಾರೆ. ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ, ಜಗದೀಶ್ ಶೆಟ್ಟರ್, ಬೈರತಿ ಬಸವರಾಜ್, ಉಮೇಶ್ ಕತ್ತಿ, ಅಣ್ಣಾ ಸಾಹೇಬ್ ಜೊಲ್ಲೆ ಅವರು ಗೋಕಾಕ್ ನ ಲಖನ್ ಜಾರಕಿಹೊಳಿ ಮನೆಗೆ ಭೇಚಿ ನೀಡಿ ಚರ್ಚಿಸಿದ್ದಾರೆ.
ಇನ್ನೂ ಸಭೆಯಲ್ಲಿ ತಮ್ಮ ಸಹೋದರರಾದ ರಮೇಶ್ ಮತ್ತು ಬಾಲಚಂದ್ರ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಲಖನ್ ಜಾರಕಿಹೊಳಿ ಘೋಷಿಸಿದ್ದಾರೆ. ಮೂವರು ಜಾರಕಿಹೊಳಿ ಸಹೋದರರು ಒಂದಾಗಿರುವುದು ಕಾಂಗ್ರೆಸ್ ಗೆ ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಕೆಲಸ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತ ಪಡಿಸಿದ್ದಾರೆ. ಅರಭಾವಿ ಮತ್ತು ಗೋಕಾಕ್ ಕ್ಷೇತ್ರಗಳ ಜನ ಬಿಜೆಪಿ ಪರವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಿಡಿ ಕೇಸ್ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಲಖನ್ ಜಾರಕಿಹೊಳಿ ಒತ್ತಾಯಿಸಿದ್ದರು. ಕಾಂಗ್ರೆಸ್ ಶಿವಕುಮಾರ್ ಅವರ ನಾಯಕತ್ವದ ಮೇಲೆ ಅವಲಂಬಿತವಾಗಿದೆ. ಉಳಿದ ನಾಯಕರು ಗ್ರೂಪಿಸಂ ಮಾಡುತ್ತಾ ಒಳಜಗಳದಲ್ಲಿ ತೊಡಗಿಕೊಂಡಿದ್ದಾರೆ, ಜನರ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ ಎಂದು ಆರೋಪಿಸಿದ್ದರು,
ಮೂವರು ಸಹೋದರರು ವಿರೋಧಿ ಬಣದಲ್ಲಿರುವ ಕಾರಣ ಸತೀಶ್ ಜಾರಕಿಹೊಳಿ ಅವರ ಗೆಲುವು ಸ್ವಲ್ಪ ಕಠಿಣ ಎಂದು ಮೂಲಗಳು ತಿಳಿಸಿವೆ, ಸತೀಶ್ ಜಾರಕಿಹೊಳಿ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರಲಿಲ್ಲ, ಆದರೆ ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಒತ್ತಾಯದ ಮೇರೆಗೆ ಸ್ಪರ್ಧಿಸಲು ಒಪ್ಪಿದರು ಎಂದು ಹೇಳಲಾಗಿದೆ.