ವೆಕ್ಟರ್ ಆರ್ಟ್ ನಲ್ಲಿ ಮೂಡಿಬಂದ ಅಂದದ ಕೊರಗಜ್ಜ, ಯಕ್ಷಗಾನ ವೇಷದ ಚಿತ್ರ

ಉಡುಪಿ(ಉಡುಪಿ ಟೈಮ್ಸ್ ವರದಿ): ವೆಕ್ಟರ್ ಆರ್ಟ್ ಇದೊಂದು ವಿಭಿನ್ನ ಬಗೆಯ ಚಿತ್ರ ಕಲೆ. ಸಾಮಾನ್ಯ ಚಿತ್ರಕಲೆಯಲ್ಲಿ ಪೆನ್ಸಿಲ್, ಬಣ್ಣಗಳನ್ನು ಬಳಸಿಕೊಂಡು ಚಿತ್ರಗಳನ್ನು ರಚಿಸಿದರೆ. ಇಲ್ಲಿ ಕಂಪ್ಯೂಟರ್  ಮೂಲಕ ಬಿಂದು ಮತ್ತು ರೇಖೆಗಳ ಸಹಾಯದಿಂದ ರಚಿಸಲಾಗುತ್ತದೆ. ಈ ಮಾದರಿಯ ಚಿತ್ರಕಲೆಗೆ ಆಸಕ್ತಿಯ ಜೊತೆಗೆ, ಏಕಾಗ್ರತೆ, ಶ್ರದ್ದೆ ತುಂಬಾ ಅಗತ್ಯವಾಗಿರುತ್ತದೆ. ಸದ್ಯ ಜಿಲ್ಲೆಯಲ್ಲಿ ವೆಕ್ಟರ್ ಆರ್ಟ್‍ನ್ನು ಕರಗತ ಮಾಡಿಕೊಂಡಿರುವ ಬೆರೆಳೆಣಿಕೆಯಷ್ಟು ಮಾತ್ರ ಪ್ರತಿಭೆಗಳಿದ್ದು ಅದರಲ್ಲಿ ಅಕ್ಷಯ್ ಆಚಾರ್ಯ ಪಡು ಪಣಂಬೂರು ಕೂಡಾ ಒಬ್ಬರು.

ಪಡು ಪಣಂಬೂರಿನ ಪಿ ಸುಧೀಂದ್ರ ಆಚಾರ್ಯ ಹಾಗೂ ಶೋಭಾ ಎಸ್ ಆಚಾರ್ಯ ಅವರ ಪುತ್ರನಾಗಿರುವ ಇವರು, ಮುಲ್ಕಿಯ ವಿಜಯ ಕಾಲೇಜ್ ನಲ್ಲಿ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದಾರೆ. ಆರಂಭದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ವೆಕ್ಟರ್ ಆರ್ಟ್‍ನ ಸೆಲ್ಫ್ ಥಾಟ್ ಆರ್ಟಿಸ್ಟ್.

ವೆಕ್ಟರ್ ಆರ್ಟಿಸ್ಟ್ ಎಸ್.ಎ ಶಶಾಂಕ್ ಆಚಾರ್ಯ ಅವರಿಂದ ಪ್ರಭಾವಿತರಾದ ಇವರಿಗೆ ಅದೆಗೋ ವೆಕ್ಟರ್ ಆರ್ಟ್ ಕಡೆಗೆ ಒಲವು ಹುಟ್ಟಿಕೊಂಡಿತ್ತು. ವೆಕ್ಟರ್ ಆರ್ಟ್‍ನ ಪ್ರಾಥಮಿಕ ಮಾಹಿತಿಯನ್ನು ಶಶಾಂಕ್ ಆಚಾರ್ಯ ಅವರಿಂದ ಪಡೆದು ಸ್ವ ಇಚ್ಚೆಯಿಂದ, ಸ್ವಂತ ಪ್ರಯತ್ನದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಕಲಿಕೆಯ ಬಿಡುವಿನ ವೇಳೆಯನ್ನು ಈ ಆರ್ಟ್‍ಗಾಗಿ ಮೀಸಲಿರಿಸಿ ಮೊತ್ತ ಮೊದಲು ಮಂತ್ರ ದೇವತೆಯ ಚಿತ್ರ ಬರೆಯುತ್ತಾರೆ. ತಮ್ಮ ಮೊದಲ ಮಂತ್ರ ದೇವತೆಯ ಚಿತ್ರ ಬಿಡಿಸಲು 19 ರಿಂದ 20 ದಿನ ಬೇಕಾಯಿತು ಎನ್ನುವ ಇವರು, ಪ್ರಸ್ತುತ ಒಂದು ಆರ್ಟ್ ಬಿಡಿಸಲು 2 ರಿಂದ 3 ದಿನ ಬೇಕಾಗುತ್ತದೆ ಎನ್ನುತ್ತಾರೆ.

ಕಳೆದ ನಾಲ್ಕು ತಿಂಗಳಿನಿಂದ ವೆಕ್ಟರ್ ಆರ್ಟ್‍ನಲ್ಲಿ ಚಿತ್ರ ಬಿಡಿಸುವುದನ್ನು ಆರಂಭಿಸಿರುವ ಇವರು, ಇದುವರೆಗೆ 5 ಚಿತ್ರಗಳನ್ನು ಬಿಡಿಸಿದ್ದಾರೆ. ಇವರು ಬಿಡಿಸಿರುವುದು ಬೆರಳೆಣಿಕೆಯ ಚಿತ್ರಗಳೇ ಆದರೂ ಇಂತಹ ಕಠಿಣವಾದ ಡಿಜಿಟಲ್ ಡ್ರಾಯಿಂಗ್‍ನ್ನು ಸೆಲ್ಫ್ ಥಾಟ್ ಆರ್ಟಿಸ್ಟ್ ಆಗಿ ಕಲಿತಿರುವುದು ನಿಜಕ್ಕೂ ಹೆಮ್ಮೆಯ ವಿಚಾರನೆ. ಇನ್ನು ತಮ್ಮಂತೆಯೇ ವೆಕ್ಟರ್ ಆರ್ಟ್ ಕಲಿಯಬೇಕು ಎನ್ನುವ ಆಸಕ್ತರಿಗೆ , ಈ ಆರ್ಟ್ ಕಲಿಯಬೇಕು ಎನ್ನುವವರಿಗೆ ಮುಖ್ಯವಾಗಿ ತಾಳ್ಮೆ ಬೇಕು ಇದರೊಂದಿಗೆ ಕ್ರಿಯೇಟಿವಿಟಿ ಹಾಗೂ ನಮ್ಮದೆ ಆದ ಐಡಿಯಾಗಳು ಅಗತ್ಯ ಎನ್ನುವ ಇವರು ವೆಕ್ಟರ್ ಆರ್ಟ್‍ನಲ್ಲಿ ತಾನು ಕಲಿಯಬೇಕಾದದ್ದು ಇನ್ನೂ ತುಂಬಾ ಇದೆ ಎನ್ನುತ್ತಾರೆ.

ಬೇರೆ ಮಾದರಿಯ ಡ್ರಾಯಿಂಗ್, ಪೇಯಿಂಟಿಂಗ್ ಗೆ ಹೋಲಿಸಿದರೆ ಇದೊಂದು ವಿಭಿನ್ನ ಹಾಗೂ ತುಂಬಾನೆ ಕಠಿಣವಾಗಿರುವ ಒಂದು ಬಗೆಯ ಚಿತ್ರಕಲೆ. ಡಿಜಿಟಲ್ ಡ್ರಾಯಿಂಗ್ ಆಗಿರುವುದರಿಂದ ಇದರಲ್ಲಿ ಯವುದೇ ಡಿಸೈನ್ ಮಾಡುವಾಗ ಶೇಪ್ ರಚಿಸುವಾಗ ನೀಟ್ ಫಿನಿಶಿಂಗ್ ಸಿಗುತ್ತದೆ. ಸರಿಯಾಗಿ ಏಕಾಗ್ರತೆಯಿಂದ ಚಿತ್ರ ರಚಿಸಿದರೆ ಇಲ್ಲಿ ಯವುದೇ ರೀತಿ ಡಿಸೈನ್ ಬಿಡಿಸಲು ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ. ಇದೊಂದು ಕಂಪ್ಯೂಟರ್ ಮೂಲಕ ಮೌಸ್‍ನ್ನು ಬಳಸಿಕೊಂಡು ಬಿಂದುಗಳು ಹಾಗೂ ರೇಖೆಗಳ ಮೂಲಕ ಬಿಡಿಸುವ ಚಿತ್ರವಾಗಿರುವುದರಿಂದ ಇಲ್ಲಿ ಆಸಕ್ತಿಯ ಜೊತೆಗೆ ಏಕಾಗ್ರತೆ ತುಂಬಾ ಅಗತ್ಯವಾಗಿರುತ್ತದೆ. ಸದ್ಯ ಜಿಲ್ಲೆಯಲ್ಲಿ ಇಂತಹ ಆರ್ಟ್‍ನ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ.

ಸಾಮಾನ್ಯವಾಗಿ ಕಣ್ಣ ಮುಂದೆ ಈ ಆರ್ಟ್‍ನಿಂದ ರಚಿತವಾದ ಚಿತ್ರಗಳು ಇದ್ದರೂ ಯಾವುದೊ ಒಂದು ಪೈಟಿಂಗ್ ಅಂದುಕೊಳ್ಳುವವರೇ ಹೆಚ್ಚು. ವೆಕ್ಟರ್ ಆರ್ಟ್‍ನ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳುವಂತಾಗಬೇಕು. ಹಾಗೂ ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಈ ಆರ್ಟ್ ಹಾಗೂ ಈ ಆರ್ಟ್‍ನ್ನು ಬಿಡಿಸುವ ಪ್ರತಿಭೆಗಳನ್ನು ಬೆಳೆಸುವ ಪ್ರಯತ್ನ ಆಗಬೇಕು ಎನ್ನುತ್ತಾರೆ. ಸದ್ಯ ತೆರೆಮರೆಯಲ್ಲಿರುವ ಇಂತಹ ಕಲೆಗಳು ಮತ್ತು ಇಂತಹ ಪ್ರತಿಭೆಗಳು ಮುನ್ನೆಲೆಗೆ ಬರಬೇಕಾಗಿದೆ. ಇಂತಹ ಕಲೆ ಹಾಗೂ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದೇ ಇವರಿಗೆ ನೀಡುವ ನಿಜವಾದ ಪ್ರಶಸ್ತಿಗಳು.

2 thoughts on “ವೆಕ್ಟರ್ ಆರ್ಟ್ ನಲ್ಲಿ ಮೂಡಿಬಂದ ಅಂದದ ಕೊರಗಜ್ಜ, ಯಕ್ಷಗಾನ ವೇಷದ ಚಿತ್ರ

Leave a Reply

Your email address will not be published. Required fields are marked *

error: Content is protected !!