| ಉಡುಪಿ(ಉಡುಪಿ ಟೈಮ್ಸ್ ವರದಿ): 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭಿಸಿದ್ದು ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 113 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಈ ಪೈಕಿ 74 ಸರಕಾರಿ ಆಸ್ಪತ್ರೆಗಳಲ್ಲಿ, 19 ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು 40 ಸಬ್ ಸೆಂಟರ್ ಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿರುವ ಆಯುಷ್ ವೈದ್ಯರನ್ನು ಬಳಸಿಕೊಂಡು 40 ಸಬ್ ಸೆಂಟರ್ ಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ 250 ರೂ ಪಾವತಿಸಿ ಲಸಿಕೆ ಪಡೆಯಬಹುದು. ಅಲ್ಲದೆ ಲಸಿಕೆ ಪಡೆಯುವವರು ಆರೋಗ್ಯ ಸೇತು ಆಪ್ ಮೂಲಕಾನೂ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದು. ಅಥವಾ ನೇರವಾಗಿಯೂ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಆದರೆ ಲಸಿಕೆ ಪಡೆಯಲು ಬರುವ ಫಲಾನುಭವಿಗಳು ತಮ್ಮ ಫೋಟೋ ಇರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕಾಗುತ್ತದೆ ಎಂದು ತಿಳಿಸಿದರು.
ಇನ್ನು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವ 45 ವರ್ಷ ಮೇಲ್ಪಟ್ಟ 4,00386 ಫಲಾನುಭವಿಗಳು ಇದ್ದು, ಈ ಪೈಕಿ 19 ಶೇ. ಮಂದಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ 24,000 ಇದ್ದು ಯಾವುದೇ ರೀತಿಯಲ್ಲೂ ಲಸಿಕೆಯ ಕೊರತೆ ಉಂಟಾಗುವುದಿಲ್ಲ. ರಾಜ್ಯಕ್ಕೆ 15 ಲಕ್ಷಕ್ಕೂ ಅಧಿಕ ಲಸಿಕೆ ಪೂರೈಕೆಯಾಗಿದ್ದು, ಈ ಪೈಕಿ ಜಿಲ್ಲೆಯ ಫಲಾನುಭವಿಗಳಿಗೆ ಬೇಕಾಗುವಷ್ಟು ಲಸಿಕೆ ನೀಡುವಂತೆ ಎನ್ ಎಚ್ಎಂ ಬಳಿ ಕೇಳಿದ್ದು ಅವರು ಜಿಲ್ಲೆಗೆ ಅಗತ್ಯವಿರುವಷ್ಟು ಲಸಿಕೆ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ನ ಟಾಸ್ಕ್ ಫೆÇೀರ್ಸ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಟಾಸ್ಕ್ ಪೋರ್ಸ್ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಫಲಾನುಭವಿಗಳನ್ನು ಗುರುತಿಸಿ ನಿಗದಿತ ದಿನಾಂಕ ದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಎಂದರು ಅಲ್ಲದೆ ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಈ ಅವಧಿಯಲ್ಲಿ ಹಿರಿಯರಿಗೆ ಕೋವಿಡ್ ಲಸಿಕೆ ನೀಡುವುದರಿಂದ ಕೋವಿಡ್‍ನ ಅಪಾಯದ ಪ್ರಮಾಣವನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ಪ್ರತಿ ಮನೆಯ ಸದಸ್ಯರು ತಮ್ಮ ಮನೆಯ ಹಿರಿಯರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಕೊಡಿಸುವ ಕೆಲಸಮಾಡಬೇಕು ಎಂದರು.
ಕೊರೋನಾ ಅಂಕಿ ಅಂಶ: ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಈ ವರೆಗೆ 24,81,25,908 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು ಈ ಪೈಕಿ 1,24,94,207 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೆ ದೇಶದಲ್ಲಿ 1,64,688 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ 2,17,69,721 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು,ಈ ಪೈಕಿ 10,15,155 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದುವರೆಗೆ ರಾಜ್ಯದಲ್ಲಿ 12,625 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಜಿಲ್ಲೆಯ ಕೊರೋನಾ ಅಂಕಿ ಅಂಶಗಳನ್ನು ನೋಡುತ್ತಾ ಹೋಗುದಾದರೆ, ಏ.4 ರ ವೇಳೆಗೆ 4,28,440 ಮಂದಿಯ ಸ್ವಾಬ್ ಟೆಸ್ಟ್‍ನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 25,515 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 192 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ 5.04 ಶೇ. ಪ್ರಮಾಣದಲ್ಲಿ ಕೋವಿಡ್ ಪತ್ತೆಯಾಗುತ್ತಿದ್ದು, ರಾಜ್ಯದಲ್ಲಿ 4.66ಶೇ. ಪ್ರಮಾಣದಲ್ಲಿ ಪತ್ತೆಯಾಗಿದೆ. ಇನ್ನು ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಕೋವಿಡ್ 5.96 ಶೇ. ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ ನಂತರ ಏ.4 ವರೆಗೆ ಪತ್ತೆಯಾಗಿರುವ ಕೋವಿಡ್ ಪ್ರಮಾಣ ಗಮನಿಸಿದರೆ, ಜಿಲ್ಲೆಯಲ್ಲಿ 3.44 ಶೇ. ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು ಈ ಪೈಕಿ ಮಣಿಪಾಲದಲ್ಲಿ 11.79 ಶೇ. ಹಾಗೂ ಮಣಿಪಾಲ ಹೊರತು ಪಡಿಸಿ ಇತರ ಕಡೆಗಳಲ್ಲಿ 1.89 ಶೇ. ದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ಜಿಲ್ಲೆಯಲ್ಲಿ ಮಾರ್ಚ್ ನಿಂದ ಏ.4 ರ ವರೆಗೆ ಒಟ್ಟು 57,144 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1966 ಮಂದಿಯ ವರದಿ ಪಾಸಿಟಿವ್ ಎಂದು ಕಂಡು ಬಂದಿದ್ದು, 55178 ಮಂದಿಯ ವರದಿ ನೆಗೆಟಿವ್ ಎಂದು ಕಂಡು ಬಂದಿದೆ. ಮಣಿಪಾಲದಲ್ಲಿ ಈ ವರೆಗೆ 8,948 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 1,055 ಮಂದಿಯ ವರದಿ ಪಾಸಿಟಿವ್ ಬಂದರೆ 7,873 ಮಂದಿಯ ವರದಿ ನೆಗೆಟಿವ್ ಎಂದು ಕಂಡು ಬಂದಿದೆ. ಮಣಿಪಾಲ ಹೊರತು ಪಡಿಸಿ ಜಿಲ್ಲೆಯ ಇತರೆಡೆಗಳಲ್ಲಿ 48,196 ಮಂದಿಯನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿದ್ದು ಈ ಪೈಕಿ 911 ಮಂದಿಯ ವರದಿ ಪಾಸಿಟಿವ್ ಬಂದಿದ್ದು, 47285 ಮಂದಿಯ ವರೆದಿ ನೆಗೆಟಿವ್ ಕಂಡು ಬಂದಿದೆ. ಇನ್ನು ಮಣಿಪಾಲ ವ್ಯಾಪ್ತಿಯಲ್ಲಿ ಒಟ್ಟು 8,948 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 1,055 ಮಂದಿಯ ವರದಿ ಪಸಿಟಿವ್ ಎಂದು ಕಂಡು ಬಂದಿದೆ. ಹಾಗೂ 11.79 ಶೇ. ಪ್ರಮಾಣದಲ್ಲಿ ಕೋವಿಡ್ ಪತ್ತೆಯಾಗಿದೆ. ಈ ಪೈಕಿ ಕಂಟೈನ್‍ಮೆಂಟ್ ಝೋನ್‍ನಲ್ಲಿ 6,194 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು ಈ ಪೈಕಿ 956 ಮಂದಿಯ ವರದಿ ಪಾಸಿಟಿವ್ ಎಂದು ಪತ್ತೆಯಾಗಿದ್ದು ಕೋವಿಡ್ ಪ್ರಕರಣಗಳ ಪತ್ತೆ ಪ್ರಮಾಣ 15.43ಶೇ. ದಷ್ಟಿದೆ. ಬಫರ್ ಝೋನ್‍ನಲ್ಲಿ 2,754 ಮಂದಿ ಕೋವಿಡ್ ಟೆಸ್ಟ್‍ಗೆ ಒಳಪಟ್ಟಿದ್ದು, ಈ ಪೈಕಿ 99 ಮಂದಿಯ ವರದಿ ಪಾಸಿಟಿವ್ ಎಂದು ಕಂಡು ಬಂದಿದೆ. ಹಾಗೂ 3.59 ಶೇ. ದಷ್ಟು ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ.
| |