ಪಡುಬಿದ್ರೆ: ವಿದ್ಯುತ್ ಸ್ಥಾವರದಲ್ಲಿ ಬೂದಿ ಮಿಶ್ರಣದ ಕೆಸರು -ಸಾರ್ವಜನಿಕರ ತೀವ್ರ ವಿರೋಧ

ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪಡುಬಿದ್ರೆಯಲ್ಲಿ ನಿರ್ಮಾಣಗೊಂಡಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಆರಂಭದಲ್ಲೇ ಈ ಭಾಗದ ಜನರು ವಿರೋಧ ವ್ಯಕ್ತ ಪಡಿಸಿದ್ದರು. ಸ್ಥಳೀಯರ ವಿರೋಧದ ನಡುವೆ ಆರಂಭಗೊಂಡ ಈ ಸ್ಥಾವರದಿಂದ ಈ ಭಾಗದ ಜನರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇದಕ್ಕೆ ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಈ ಸ್ಥಾವರದ ಬೂದಿ ಮಿಶ್ರಣದಂತಿರುವ ಸಾವಿರಾರು ಲೋಡ್ ಕೆಸರನ್ನು ಖಾಸಗಿ ಜಾಗದಲ್ಲಿ ಸುರಿಯಲಾಗುತ್ತಿದೆ. ಇದರೊಂದಿಗೆ ಈ ತ್ಯಾಜ್ಯವನ್ನು ಸಾಗಿಸುವ ಮಾರ್ಗಗಳಲ್ಲಿ ಈ ಕೆಸರು ತ್ಯಾಜ್ಯ ಹರಡುತ್ತಿದ್ದು ಸಾರ್ವಜನಿಕರಲ್ಲಿ ಮತ್ತೆ ಅಪಾಯದ ಭೀತಿ ಶುರುವಾಗಿದೆ. ಕೆಲ ದಿನಗಳ ಹಿಂದೆ ಎರ್ಮಾಳು ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಯುಪಿಸಿಎಲ್ ಪಂಪ್ ಹೌಸ್ ಸುತ್ತಲ ಪ್ರದೇಶ ಧೂಳುಮಯವಾಗಿದ್ದರಿಂದ ಆತಂಕಗೊಂಡಿದ್ದ ಸ್ಥಳೀಯರು ಗ್ರಾಮ ಪಂಚಾಯತ್ ಗೆ ಈ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಅಡಳಿತ ಸಮಿತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಅಲ್ಲದೆ ಈ ಭಾಗದ ಜನರಿಗೆ ಸಮಸ್ಯೆಯಾಗದೆ  ರೀತಿಯಲ್ಲಿ ಪೂರಕ ವ್ಯವಸ್ಥೆಯನ್ನು ಕಲ್ಪಿಸಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.

ಇದೀಗ ಗ್ರಾಮ ಪಂಚಾಯತ್‍ನ ಸೂಚನೆಯ ಹೊರತಾಗಿಯೂ ಇದೇ ಪಂಪ್ ಹೌಸ್ ಸಮೀಪದ ಜಾಗದಲ್ಲಿ ಈ ಬೂದಿ ಮಿಶ್ರಿತ ಕೆಸರನ್ನು ವಿಲೇವಾರಿ ಮಾಡಲು ಮತ್ತೆ ಮುಂದಾಗಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆ ಈ ಕೆಸರನ್ನು ಸಮುದ್ರದ ಹತ್ತಿರ ಮರಳು ತೆಗೆದ ಹೊಂಡಗಳಿಗೆ ಸುರಿಯಲಾಗುತ್ತಿದೆ. ಈ ಜಾಗಕ್ಕೆ ಟಿಪ್ಪರ್‍ಗಳನ್ನು ಬಳಸಿ ಕೆಸರುಗಳನ್ನು ಸಾಗಿಸಲಾಗುತ್ತಿದ್ದು ಇದರಿಂದ ಈ ಕೆಸರು ರಸ್ತೆಯಲ್ಲಿ ಚೆಲ್ಲಿಹೋಗುತ್ತಿದೆ. ಈ ಕಾರಣದಿಂದ ಕಾಂಕ್ರೀಟ್ ರಸ್ತೆ ಧೂಳುಮಯವಾಗಿದೆ. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಜನವಿರೋಧಿ ಕಾಮಗಾರಿ ಹಿಂದೆ ಬಿಜೆಪಿ ಮುಖಂಡರೊಬ್ಬರ ಕೈವಾಡ ಇದೆ ಎಂಬ ಆರೋಪಗಳೂ ಕೇಳಿ ಬಂದಿದೆ.

ಈ ಬಗ್ಗೆ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಪೂಜಾರಿ, ಕೆಲ ದಿನಗಳ ಹಿಂದೆ ಪಂಪ್ ಹೌಸ್‍ನಲ್ಲಿ ಧೂಳು ಸಮಸ್ಯೆ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾದ ಕೆಲಸ ಕಾರ್ಯಗಳನ್ನು ನಿಲ್ಲಿಸಿದ್ದೇವೆ. ಇದೀಗ ಸಹಸ್ರಾರು ಲೋಡ್ ಬೂದಿ ಬಣ್ಣದ ಕೆಸರನ್ನು ಪಂಪ್ ಹೌಸ್‍ನ ಹಿಂಬದಿಯ ಖಾಸಗಿ ಮರಳು ತೆಗೆದ ಜಾಗದಲ್ಲಿ ಹೊಂಡಗಳಿಗೆ ಅಪಾಯಕಾರಿ ಸ್ಥಿತಿಯಲ್ಲಿ ಸುರಿಯುತ್ತಿದ್ದಾರೆ. ಮಳೆ ಬಂದರೆ ಈ ಭಾಗ ಸಂಪೂರ್ಣ ಜಲಮಯವಾಗುತ್ತಿದೆ. ಈ ಭಾಗದಲ್ಲಿ ಸಾರ್ವಜನಿಕರು, ಮಕ್ಕಳು, ಜಾನುವಾರುಗಳು ಇದೇ ಮಾರ್ಗವಾಗಿ ಚಲಿಸುವುದರಿಂದ ಜಾನುವಾರುಗಳು, ಮಕ್ಕಳು ಕೆಸರು ಹಾಕಿದ ಹೊಂಡಕ್ಕಿಳಿದರೆ ಅಪಾಯ ಆಹ್ವಾನಿಸಿದಂತಾಗುತ್ತದೆ. ಈ ಬಗ್ಗೆ ಸ್ಥಳಿಯಾಡಳಿತ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡದೆ ಕೆಸರು ಹಾಕಿದ್ದು ಇದನ್ನು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!