ಮಾಹೆ: ಕುಲಪತಿಯಾಗಿ ಡಾ.ಎಂ. ಡಿ.ವೆಂಕಟೇಶ್
ಮಣಿಪಾಲ: ಪ್ರಸ್ತುತ ಸಿಕ್ಕಿಂ-ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್, ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ
ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಎಂದು ಗುರುತಿಸಲ್ಪಟ್ಟ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ನೂತನ ಕುಲಪತಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರು, ಈಗಿನ ಕುಲಪತಿ ಡಾ. ಹೆಚ್. ವಿನೋದ್ ಭಟ್, ತಮ್ಮ ಕಾಲಾವಧಿಯನ್ನು ಯಶಸ್ವಿಯಾಗಿ ಪೂರೈಸುವುದರ ಹಿನ್ನೆಲೆಯಲ್ಲಿ, ಜುಲೈ 1 ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ, ಡಾ. ರಾಮದಾಸ್ ಪೈಯವರು ಮಾಹೆಯನ್ನು, ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಸ್ಥಾನಕ್ಕೆ ಎತ್ತರಿಸಲು ಬಹುವಾಗಿ ಶ್ರಮಿಸಿದ, ವಿಶ್ವವಿದ್ಯಾಲಯದಲ್ಲಿ ನೂರಕ್ಕೂ ಹೆಚ್ಚಿನ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ ಹಾಗೂ ಜಾಗತಿಕ ಮಟ್ಟದಲ್ಲಿ ಮಾಹೆಯ ಸ್ಥಿತಿಯನ್ನು ಎತ್ತರಕ್ಕೆ ಕೊಂಡೊಯ್ದ ಈಗಿನ ಕುಲಪತಿ ಡಾ. ವಿನೋದ್ ಭಟ್ ಇವರ ಕೊಡುಗೆಯನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಡಾ. ವಿನೋದ್ ಭಟ್ ಅವರನ್ನು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು ಅವರು ಜುಲೈ 1ರಂದು ಅಧಿಕಾರವನ್ನು ವಹಿಸಿಕೊಳ್ಳಲಿರುವರು.
ಮಾಹೆಯ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಆಯ್ಕೆ ಸಮಿತಿಯು ಡಾ. ಎಂ. ಡಿ. ವೆಂಕಟೇಶ್ ಅವರ ಹೆಸರನ್ನು ತೀರ್ಮಾನಗೊಳಿಸಿದ್ದು, ಇವರು 2017ರಿಂದ ಸಿಕ್ಕಿಂ-ಮಣಿಪಾಲ ವಿವಿಯ ಕುಲಪತಿಗಳೂ ಆಗಿದ್ದು, ಅಲ್ಲಿ ಮೂರು ವರುಷಗಳ ಯಶಸ್ವಿ ಅಧಿಕಾರಾವಧಿಯನ್ನು ಜೂನ್ 30 ರಂದು ಪೂರ್ಣಗೊಳಿಸಲಿರುವರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದವರಾಗಿದ್ದು, ಸಿಕ್ಕಿಂ-ಮಣಿಪಾಲ್ ವಿಶ್ವವಿದ್ಯಾಲಯದ ಅಧಿಕಾರಾವಧಿಯಲ್ಲಿ ಅಲ್ಲಿನ ಮೂಲ ಸೌಲಭ್ಯಗಳು, ಶೈಕ್ಷಣಿಕ ಪ್ರಕ್ರಿಯೆಗಳು, ಐಟಿ ಸೌಕರ್ಯಗಳು ಮುಂತಾದ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿರುವರಲ್ಲದೆ, ವಿವಿಧs ಯೋಜನೆಗಳು, ಸಂಶೋಧನೆಗಳು ಪ್ರಕಟಣೆಗಳ ನಿಟ್ಟಿನಲ್ಲಿ ಮೇಲ್ಮುಖ ಸಾಧನೆಗೆ ಕಾರಣೀಕರ್ತರಾಗಿದ್ದಾರೆ.
ಅವರು ಹೊಂದಿರುವ ವಿಶೇಷ ಆಡಳಿತಾ ಪರಿಣತಿಯು ಸಿಕ್ಕಿಂ-ಮಣಿಪಾಲ ವಿಶ್ವವಿದ್ಯಾಲಯವು ದೇಶದ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ಉಚ್ಛ ಸ್ಥಾನದಲ್ಲಿ
ಗುರುತಿಸಿಕೊಳ್ಳುವಂತಾಗಿದೆ. ಈಗ ಕುಲಪತಿಯಾಗಿ ನಿಯುಕ್ತರಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ 1978ರಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಮುಗಿಸಿ ಸೇನೆಯ ವೈದ್ಯಕೀಯ ವಿಭಾಗವನ್ನು
ಸೇರಿದರು. 1986ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಇ.ಎನ್.ಟಿ.ಯಲ್ಲಿ ಎಂ.ಎಸ್ ಡಿಗ್ರಿ ಪಡೆದ ಇವರು ಕೊಕ್ಲಿಯರ್ ಇಂಪ್ಲಾಂಟೇಶನ್ ಮತ್ತು ನ್ಯೂರೊಟಾಲೊಜಿಯಲ್ಲಿ ದೇಶ-ವಿದೇಶಗಳಲ್ಲಿ ತರಬೇತಿಯನ್ನು ಪಡೆದು ಕೊಕ್ಲಿಯರ್ ಇಂಪ್ಲಾಂಟೇಶನ್‌ನಲ್ಲಿ ನುರಿತ ವೈದ್ಯರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೂವತ್ತೆಂಟು ವರುಷಗಳ ಕಾಲ ಸೇನಾ ಪಡೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ ಡಾ. ವೆಂಕಟೇಶ್ ಇವರು ಅನೇಕ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ, ಅವರು ಈ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದು, ಅವರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ತರಬೇತಿ ಹೊಂದಿದ
ವಿದ್ಯಾರ್ಥಿಗಳ ಸಮೂಹ ವಿಶೇಷ ಪರಿಣತಿಯನ್ನು ಹೊಂದಿ ವೈದ್ಯಕೀಯ ಕ್ಷೇತ್ರದ ಸೇವೆಯಲ್ಲಿ ತೊಡಗಿದ್ದಾರೆ. ಅವರು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಆನ್‌ಲೈನ್ ಪ್ರವೇಶ ಪ್ರಕ್ರಿಯೆಯನ್ನು ಪರಿಚಯಿಸುವ ಮೂಲಕ ಎ. ಎ ಎ ಎಎಫ್‌ಎಂಸಿ ಯಲ್ಲಿ ಪೂರ್ಣ ಪಾರದರ್ಶಕ ಮತ್ತು ಪರಿಣಾಮಕಾರಿ ಪ್ರವೇಶ ಪ್ರಕ್ರಿಯೆ ನಡೆಯುವಂತೆ ಮಾಡಿರುತ್ತಾರೆ.
ಡಾ. ವೆಂಕಟೇಶ್‌ರವರ ಪತ್ನಿ ಕುಸುಮಾ ವೆಂಕಟೇಶ್‌ರವರು ಪರಿಣಿತ ಶಿಕ್ಷಣ ತಜ್ಞೆಯಾಗಿದ್ದು, ಓರ್ವ ಪುತ್ರಿ ಅಮೇರಿಕಾ ಮತ್ತು ಇನ್ನೋರ್ವ ಪುತ್ರಿ ಮುಂಬೈಯಲ್ಲಿ ನೆಲೆಸಿರುತ್ತಾರೆ.