ಮಾದಕ ವಸ್ತು ಪರೀಕ್ಷೆಗೆ ಪ್ರತ್ಯೇಕ ಪ್ರಯೋಗಾಲಯ ತೆರೆಯಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಮಾದಕ ವಸ್ತುಗಳು ಮತ್ತು ನಿಷೇಧಿತ ಪದಾರ್ಥಗಳ ಪರೀಕ್ಷೆಗೆ ಪ್ರತ್ಯೇಕ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಅರ್ಜುನ್ ದೀಪಕ್ ಮೆಹ್ತಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಪೀಠ, ಈ ಆದೇಶವನ್ನು ಹೊರಡಿಸಿದೆ. 

ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿರುವ ಜೀವನ್‌ಬಿಮಾನಗರ ಪೊಲೀಸ್ ಠಾಣೆ ಪೊಲೀಸರು ನಿಷೇಧಿತ ವಸ್ತು ದೊರೆತಾಗ ಫೀಲ್ಡ್ ಟೆಸ್ಟ್ ನಡೆಸಿಲ್ಲ. ಎನ್‌ಸಿಬಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವಶಪಡಿಸಿಕೊಂಡ ವಸ್ತುಗಳನ್ನು 72 ಗಂಟೆಗಳಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಕಳಹಿಸಬೇಕು ಮತ್ತು 15 ದಿನಗಳಲ್ಲಿ ವರದಿ ಪಡೆಯಬೇಕು. ಈ ಪ್ರಕರಣದಲ್ಲಿ ವರದಿ ಪಡೆದಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ನಿಷೇಧಿತ ವಸ್ತುಗಳು ವಾಣಿಜ್ಯ ಪ್ರಮಾಣಕ್ಕಿಂತ ಹೆಚ್ಚಿಗೆ ಸಂಗ್ರಹವಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಜಾಮೀನು ನೀಡಲು ಆಗುವುದಿಲ್ಲ ಎಂದು ಪೀಠ ಹೇಳಿದೆ. 

ಇಡೀ ರಾಜ್ಯದಲ್ಲಿ ಒಂದೇ ಒಂದು ವಿಧಿ ವಿಜ್ಞಾನ ಪ್ರಯೋಗಾಲಯ ಇರುವ ಕಾರಣ 15 ದಿನಗಳಲ್ಲಿ ವರದಿ ಪಡೆಯಲು ಆಗುತ್ತಿಲ್ಲ. ಮಾದಕ ವಸ್ತುಗಳ ಪರೀಕ್ಷೆಗಾಗಿಯೇ ಪ್ರತ್ಯೇಕ ಪ್ರಯೋಗಾಲಯ ತೆರೆಯುವ ಸಂಬಂಧ ಗೃಹ ಇಲಾಖೆಯ ಮನವೊಲಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದೆ. ಅಲ್ಲದೆ, ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ರವಾನಿಸುವಂತೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ. 

Leave a Reply

Your email address will not be published. Required fields are marked *

error: Content is protected !!