ಹನಿಟ್ರ್ಯಾಪ್ಗಾಗಿ 500 ಕೋಟಿ ರೂ. ವ್ಯವಹಾರ: ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಇಡಿಗೆ ದೂರು
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಹಿರಂಗಗೊಂಡಿರುವ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಾಗಿದೆ.
ಬನಶಂಕರಿ ನಿವಾಸಿ ಶ್ರೀಧರ್ ಮೂರ್ತಿ ಎಂಬುವವರು ಡಿಕೆ ಶಿವಕುಮಾರ್, ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯ್ ಮುಳಗುಂದ, ಶಂಕಿತ ಮಾಜಿ ಪತ್ರಕರ್ತ ನರೇಶ್ ಗೌಡ ಸೇರಿ ಐವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.
ಹನಿಟ್ರ್ಯಾಪ್ ಹಾಗೂ ಒಳಸಂಚಿಗೆ ಸುಮಾರು 500 ಕೋಟಿ ರೂ. ಅಕ್ರಮ ವ್ಯವಹಾರ ನಡೆದಿದ್ದು, ಇಸಿಐಆರ್ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ದೂರು ಆಧರಿಸಿ ತನಿಖೆ ನಡೆಸಬೇಕು. ಸಿಡಿ ಪ್ರಕರಣದಲ್ಲಿ ಜಾರಕಿಹೊಳಿಯನ್ನು ಸಿಲುಕಿಸಲು ಹನಿಟ್ರ್ಯಾಪ್ ಮಾಡಲಾಗಿದೆ. ಇದಕ್ಕಾಗಿ ಸುಮಾರು 500 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಹೀಗಾಗಿ ಇಸಿಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ದೆಹಲಿಯ ಇಡಿ ನಿರ್ದೇಶಕ ಹಾಗೂ ಬೆಂಗಳೂರಿನ ಜಂಟಿ ನಿರ್ದೇಶಕರಿಗೆ ಶ್ರೀಧರ್ ಮೂರ್ತಿ ದೂರು ನೀಡಿದ್ದಾರೆ.