ಜಿಲ್ಲೆಯಲ್ಲಿಯೇ ಬೋಟ್ ರೈಡಿಂಗ್, ಕಯಾಕಿಂಗ್ ಸಾಹಸ ಕ್ರೀಡೆಯ ಅನುಭವ ಪಡೆಯುವಂತಾಗಬೇಕು: ಜಿಲ್ಲಾಧಿಕಾರಿ
ಉಡುಪಿ( ಉಡುಪಿ ಟೈಮ್ಸ್ ವರದಿ) :ಅಂತರಾಷ್ಟ್ರೀಯ ಮನ್ನಣೆ ಪಡೆದಿರುವ ಪಡುಬಿದ್ರೆ ಬೀಚ್‍ನ್ನು ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದಾರೆ.
ಪಡುಬಿದ್ರೆ ಬೀಚ್‍ನಲ್ಲಿ ಬೋಟ್ ರೈಡಿಂಗ್‍ನ ಅನುಭವ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ಊಟಿ ಮೊದಲಾದ ಕಡೆಗಳಲ್ಲಿ ಪಡೆಯುತ್ತಿದ್ದ ಬೋಟ್ ರೈಡಿಂಗ್, ಕಯಾಕಿಂಗ್ ನಂತಹ ಸಾಹಸ ಕ್ರೀಡೆಯ ಅನುಭವವನ್ನು ಜಿಲ್ಲೆಯಲ್ಲಿಯೇ ಪಡೆಯುವಂತಾಗಬೇಕು ಎಂಬ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಹಿನ್ನೀರು ಇರುವುದರಿಂದ ಪ್ರವಾಸಿಗರು ಯಾವುದೇ ಭಯವಿಲ್ಲದೆ ಆರಾಮದಾಯಕವಾಗಿ ಕಯಾಕಿಂಗ್ ಅಥವಾ ಬೋಟ್ ರೈಡಿಂಗ್ ಮಾಡಬಹುದು ಎಂದರು.
ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಪಾಹಾರಕ್ಕಾಗಿ ಅನುಕೂಲವಾಗುವಂತೆ ಒಂದು ಕ್ಯಾಂಟೀನ್ ಆರಂಭಿಸಿದ್ದು, ಈ ಮೂಲಕ ಇಲ್ಲಿನ ಸ್ಥಳೀಯ 49 ಮಂದಿಗೆ ಉದ್ಯೋಗವಕಾಶ ನೀಡಲಾಗಿದೆ. ಈ ಪ್ರದೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದ್ದು, ಇನ್ನೆರಡು ವರ್ಷಗಳಲ್ಲಿ 49 ರಿಂದ 100 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡುವಂತಾಗಬೇಕು ಎಂಬುದು ಜಿಲ್ಲಾಡಳಿತದ ಆಶಯವಗಿದೆ ಎಂದರು.
ಬೀಚ್ ಮ್ಯಾನೆಜ್‍ಮೆಂಟ್ ಕಮೀಟಿಯಿಂದ ಇನ್ವೆಸ್ಟ್ ಮಾಡಿ ಕ್ಯಾಂಟೀನ್ ವ್ಯವಸ್ಥೆ ಹಾಗೂ ಕಯಾಕಿಂಗ್‍ಗೆ ಬೇಕಾದ ಬೋಟ್ ಗಳನ್ನು ಖರೀದಿ ಮಾಡಿದ್ದು ಇದಕ್ಕೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಹೆಚ್ಚುವರಿ ಹಣ ನೀಡುವುದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಂದ ಸಂಗ್ರಹವಾಗಿವ ಹಣದಿಂದಲೇ ಇಲ್ಲಿನ ನಿರ್ವಹಣೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.