ಲಡಾಖ್ ಗಡಿಯಲ್ಲಿ ಚೀನಾ ಪಡೆಗಳ ಜತೆ ಸಂಘರ್ಷ, 20 ಯೋಧರು ಹುತಾತ್ಮ
ನವದೆಹಲಿ: ಚೀನಾದ ಸೇನಾಪಡೆಗಳೊಂದಿಗೆ ಲಡಾಖ್‌ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಮಂಗಳವಾರ ರಾತ್ರಿ ದೃಢಪಡಿಸಿದೆ. ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಂಘರ್ಷದಲ್ಲಿ ಚೀನಾ ಪಡೆಗಳಲ್ಲಿಯೂ 43 ಸಾವು–ನೋವು ಸಂಭವಿಸಿದೆ. ಇದರಲ್ಲಿ ಸಾವು ಹಾಗೂ ಗಂಭೀರ ಗಾಯಗೊಡಿರುವ ಪ್ರಕರಣಗಳು ಸೇರಿವೆ ಎಂದು ಎಎನ್‌ಐ ವರದಿ ತಿಳಿಸಿದೆ.
ಸೋಮವಾರ ರಾತ್ರಿ ನಡೆದಿದ್ದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸಂತೋಷ್ ಬಾಬು, ಹವಾಲ್ದಾರ್ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದರು ಎಂದು ಈ ಹಿಂದೆ ಹೇಳಲಾಗಿತ್ತು.
ಪ್ರಧಾನಿಗೆ ರಾಜನಾಥ್ ಸಿಂಗ್ ಮಾಹಿತಿ: ಗಡಿಯಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರ ಜತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.
‘ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಘಟನಾ ಸ್ಥಳದಲ್ಲಿ ಎರಡೂ ಕಡೆಯ ಹಿರಿಯ ಸೇನಾಧಿಕಾರಿಗಳ ನಡುವಣ ಮಾತುಕತೆ ಪ್ರಗತಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.