ಉಡುಪಿ: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ವಂಚಿಸಿದ ಜೆಡಿಎಸ್ ಮುಖಂಡ
ಉಡುಪಿ(ಉಡುಪಿ ಟೈಮ್ಸ್ ವರದಿ): ಜೆಡಿಎಸ್ ಮುಖಂಡನೋರ್ವ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮುಕ್ತಾರ್ ಇಸ್ಲಾಯಿಲ್ ಕೋಟೇಶ್ವರ ಪ್ರಕರಣದ ಆರೋಪಿ.
ಈತ ತೆಂಕನಿಡಿಯೂರಿನ ಸತೀಶ, ಅಜಿತ್ ಹಾಗೂ ಮಣಿಪಾಲದ ಸಂಗಪ್ಪ ಎಂಬ ಮೂವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾನೆ ಎಂದು ಮೂವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ ಮುಕ್ತಾರ್ ಒಂದು ವರ್ಷದ ಹಿಂದೆ ಸತೀಶ್, ಅಜಿತ್, ಸಂಗಪ್ಪ ಎಂಬ ಮೂವರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಮೂವರಿಂದಲೂ ತಲಾ 65,000 ರೂ ನಗದುಪಡೆದುಕೊಂಡಿದ್ದಾನೆ. ಆದರೆ ಈವರೆಗೂ ಉದ್ಯೋಗವು ಕೊಡಿಸದೆ, ಇತ್ತ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾನೆ. ಅಲ್ಲದೆ ಮುಕ್ತಾರ್ ತನ್ನ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಈ ಕುರಿತಂತೆ ಈ ಮೂವರು ಮುಕ್ತಾರ್ನ ಮನೆಗೆ ಹೋದ ವೇಳೆ ಮನೆಯವರೇ ಈತನ ಬಗ್ಗೆ ಬೈದಿದ್ದು, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿ ನಾವು ನಿಮಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ತಮ್ಮ ಹಣವನ್ನು ಹಿಂದಿರುಗಿಸಲು ಸಹಕಾರ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.