ರಾಜ್ಯದಲ್ಲಿ ಕೊರೋನಾ ಸ್ಫೋಟ: 3 ಟಿ ಸೂತ್ರ ಪಾಲನೆಗೆ ಮುಂದಾದ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸ್ಫೋಟಗೊಂಡಿದ್ದು, ಸೋಂಕು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘3 ಟಿ’ (ಟೆಸ್ಟ್-ಟ್ರ್ಯಾಕ್-ಟ್ರೀಟ್) ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಬುಧವಾರ ಆದೇಶ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು, ರಾಜ್ಯದಲ್ಲಿ ಕಳೆದ 5 ತಿಂಗಳಿಂದ ಕೊರೋನಾ ಪ್ರಕರಣ ಇಳಿಮುಖಗೊಂಡಿತ್ತು. ಆದರೆ, ಕೆಲವೆಡೆ 2-3 ವಾರಗಳಿಂದ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಮಾ.23ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಏ.1 ರಿಂದ ಏ.30ರವರೆಗೆ ವೈರಾಣು ಜಾಡು ಪತ್ತೆ, ಪರೀಕ್ಷೆ ಹೆಚ್ಚಳ, ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದ ಹಾಗೂ ಹೆಚ್ಚು ಪ್ರಕರಣಗಳು ವರದಿಯಾಗಿರುವ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.
ಕಂಟೈನ್ಮೆಂಟ್ ವಲಯಗಳಲ್ಲಿ ಅಗತ್ಯ ಚಟುವಟಿಕೆಗೆ ಮಾತ್ರ ಅವಕಾಶ ನೀಡಬೇಕು. ಅಗತ್ಯ ಸೇವೆ, ಅಗತ್ಯ ಸರಕು ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶ ಒದಗಿಸಬೇಕು. ಕಂಟೈನ್ಮೆಂಟ್ ವಲಯಗಳಿಂದ ಜನರ ಅನಗತ್ಯ ಸಂಚಾರಕ್ಕೆ ಅವಕಾಶ ನೀಡಬಾರದು. ಕಣ್ಗಾವಲು ತಂಡ ರಚನೆ ಮಾಡಬೇಕು.
ಈ ತಂಡ ಮನೆ ಮನೆ ಪರಿಶೀಲನೆ ನಡೆಸಬೇಕು. ನಿಗದಿತ ನಿಯಮಾವಳಿ ಪ್ರಕಾರ ಕೊರೋನಾ ಪರೀಕ್ಷೆ ಮಾಡಬೇಕು. ಕೊರೋನಾ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ 14 ದಿನಗಳ ಕಾಲ ನಿಗಾವಹಿಸಬೇಕು. ಸೋಂಕಿತರ ಶೇ.80ರಷ್ಟು ಸಂಪರ್ಕಿಸಲನ್ನು 72 ಗಂಟೆಗೊಳಗೆ ಪತ್ತೆ ಹಚ್ಚಬೇಕು. ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ವಲಯದ ಕ್ಲಿನಿಕ್ ಗಳ ಅಥವಾ ಫೀವರ್ ಕ್ಲಿನಿಕ್ ಗಳ ಮೂಲಕ ನಿಗಾವಹಿಸಬೇಕು.
ಕಂಟೈನ್ಮೆಂಟ್ ಝೋನ್ ಗಳಲ್ಲಿ ನಿಯಮ ಪಾಲನೆ ಮಾಡದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಅಲ್ಲದೆ, ಪರೀಕ್ಷೆ, ಪತ್ತೆ, ಚಿಕಿತ್ಸೆ, ಸಾರ್ವಜನಿಕರ ವರ್ತನೆ, ಕಂಟೈನ್ಮೆಂಟ್, ಲಸಿಕೆ, ದುರ್ಬಲ ವ್ಯಕ್ತಿಗಳ ರಕ್ಷಣೆ, ಆರೋಗ್ಯ ಸೇತು ಆ್ಯಪ್ ಬಳಕೆ ಹಾಗೂ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ ಹೆಚ್ಚಿರುವ ತಾಲೂಕು, ವಾರ್ಡ್ ಗಳಲ್ಲಿ ಕೊರೋನಾ ಪರೀಕ್ಷೆ ಹೆಚ್ಚಾಗಿ ಮಾಡಬೇಕು. ಈ ಪೈಕಿ ಶೇ.70ರಷ್ಟು ಆರ್’ಟಿ-ಪಿಸಿಆರ್ ಪರೀಕ್ಷೆ ಇರಬೇಕು. ಪಾಸಿಟಿವ್ ಇರುವ ಪ್ರಕರಣಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಸೋಂಕಿತರನ್ನು ಐಸೋಲೇಷನ್ ಮಾಡಬೇಕು. ಸೋಂಕಿತರ ಸಂಪರ್ಕಿತರನ್ನು ಗುರುತಿಸಬೇಕು. ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸಲಕರಣೆಗಳ ಬಗ್ಗೆ ಸ್ಥಳೀಯ ಆಡಳಿತಗಳು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಸ್ಥಳೀಯ ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸದಿದ್ದರೆ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರೂ.250 ಹಾಗೂ ಇತರೆ ಪ್ರದೇಶದಲ್ಲಿ ರೂ.100 ದಂಡ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು. ಸಾರ್ವಜನಿಕವಾಗಿ ಉಗುಳುವುದಕ್ಕೂ ಆಯಾ ಸ್ಥಳೀಯ ಪ್ರಾಧಿಕಾರದ ನಿಯಮದಂತೆ ದಂಡ ವಿಧಿಸಬೇಕು.