ಅಮೆರಿಕಾದಲ್ಲಿ 25 ಅಡಿ ಎತ್ತರದ ಹನುಮಂತನ ಪ್ರತಿಮೆ ಸ್ಥಾಪನೆ!
ಅಮೆರಿಕಾ: 25 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆಯನ್ನು ಡೆಲವೇರ್ ನ ಹಾಕೆಸ್ಸಿನ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. “ಇದರ ತೂಕ ಸುಮಾರು 45 ಟನ್. ಇದನ್ನು ತೆಲಂಗಾಣದ ವಾರಂಗಲ್ ನಿಂದ ಡೆಲವೇರ್ ಗೆ ತರಲಾಗಿದೆ” ಎಂದು ಈ ಪ್ರಾಂತ್ಯದ ಹಿಂದೂ ದೇವಾಲಯ ಅಸೋಸಿಯೇಶನ್‌ನ ಅಧ್ಯಕ್ಷ ಪತಿಬಂದ ಶರ್ಮಾ ಹೇಳಿದ್ದಾರೆ.
ಡೆಲಿವೇರ್ ನಲ್ಲಿ ಪ್ರತಿಷ್ಠಾಪಿಸಲಾಗಿರುವ ಹನುಮಂತನ ವಿಗ್ರಹ 25 ಅಡಿ ಎತ್ತರವಿದ್ದು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ಪೂರ್ಣಗೊಳಿಸಲು ಒಂದು ವರ್ಷ ಕಾಲ ಹಿಡಿದಿದೆ ಎಂದು ತಿಳಿದುಬಂದಿದೆ.
“ಪ್ರತಿಮೆಯನ್ನು ಕುಶಲಕರ್ಮಿಯೊಬ್ಬರು ನಿಗದಿಪಡಿಸಿದ ಪ್ರಕ್ರಿಯೆಯ ಪ್ರಕಾರ ತಯಾರಿಸಿ ದೇವಾಲಯಕ್ಕೆ ತಲುಪಿಸಿದ ನಂತರ, ದೇವಾಲಯದ ಅರ್ಚಕರು ನಿಗದಿತ ಪೂಜಾ ಕೈಂಕರ್ಯ ನಡೆಸಿ ಬಳಿಕ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ”
ಹನುಮಾನ್ ಪ್ರತಿಮೆಯನ್ನು ಯಂತ್ರ ಪ್ರತಿಷ್ಠ ಮತ್ತು ಪ್ರಾಣ ಪ್ರತಿಷ್ಠೆ ಮೂಲಕ ನೆರವೇರಿಸಲಾಗಿದೆ. ಆದಾಗ್ಯೂ, ಕೊರೋನವೈರಸ್ ಸಾಂಕ್ರಾಮಿಕ ರೋಗದ ಕಾರಣ ಈ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವುದಿಲ್ಲ.
ನ್ಯೂ ಕ್ಯಾಸಲ್‌ನ ಹೋಲಿ ಸ್ಪಿರಿಟ್ ಚರ್ಚ್‌ನ ಅವರ್ ಲೇಡಿ ಕ್ವೀನ್ ಆಫ್ ಪೀಸ್ ಪ್ರತಿಮೆಯ ನಂತರ ಈ ಪ್ರದೇಶದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿ ಈ ಹನುಮಾನ್ ಪ್ರತಿಮೆ ಎಂದು ಈ ಪ್ರತಿಮೆಯನ್ನು ಗುರುತಿಸಲಾಗಿದೆ. ಅಲ್ಲದೆ ಅಮೆರಿಕಾದಲ್ಲಿರುವ ಹಿಂದೂ ದೇವರ ಅತಿ ಎತ್ತರದ ಪ್ರತಿಮೆಯಾಗಿದೆ.