| ಮೂಡುಬಿದಿರೆ: ಡಕಾಯಿತರ ತಂಡವೊಂದು ಇಂದು ಬೆಳ್ಳಂಬೆಳಗ್ಗೆ ಸರಣಿ ದರೋಡೆ ನಡೆಸಿರುವ ಘಟನೆ ಕರಾವಳಿಯಲ್ಲಿ ನಡೆದಿದೆ. ಎರಡು ಕಾರುಗಳಲ್ಲಿ ಬಂದ ಡಕಾಯಿತರ ತಂಡವು ಮೂಡುಬಿದಿರೆ, ಗುರುಪುರ, ಬಜ್ಪೆಯಲ್ಲಿ ಮನೆ ಹಾಗೂ ವಾಹನ ಸವಾರರನ್ನು ಸರಣಿ ದರೋಡೆ ನಡೆಸಿ ಪರಾರಿಯಾಗಿದೆ. ಜನರನ್ನು ದರೋಡೆ ನಡೆಸುತ್ತಿದ್ದ ದರೋಡೆಕೋರರು ವಾಹನಗಳನ್ನು ಪುಡಿಗೈದಿದ್ದು ಈ ಘಟನೆ ಬೆಳ್ಳಂಬೆಳಗ್ಗೆ ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೂಡುಬಿದಿರೆ ಬಳಿ ಎರಡು ಮನೆಗಳ ಮೇಲೆ ಡಕಾಯಿತ ತಂಡವೊಂದು ದಾಳಿ ನಡೆಸಿದ್ದು, ಅಲ್ಲೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿಗೈದಿದೆ. ಇದೇ ವೇಳೆ ದರೋಡೆ ಕೋರರು ಒಂದು ದ್ವಿಚಕ್ರ ವಾಹನವನ್ನು ದರೋಡೆ ಮಾಡಿದ್ದಾರೆ.
ತೋಡಾರಿನ ಅರುಣ್ ಎಂಬವರ ಮನೆಗೆ ಕಲ್ಲು ಎಸೆದ ಡಕಾಯಿತರ ಗುಂಪು ಅಂಗಳದಲ್ಲಿದ್ದ ಕಾರಿನ ಹಿಂಬದಿಯ ಗ್ಲಾಸಿಗೆ ಹಾನಿ ಮಾಡಿದೆ. ಮತ್ತು ಗಾಂಧಿನಗರದ ಹರೀಶ್ಚಂದ್ರ ನಾಯ್ಕ್ ಎಂಬವರ ಮನೆಗೆ ಕಲ್ಲು ಎಸೆದು ಅಂಗಳದಲ್ಲಿದ್ದ ಓಮ್ನಿ ಕಾರಿನ ಗ್ಲಾಸನ್ನು ಪುಡಿ ಮಾಡಿ ಒಳಗಡೆ ಇದ್ದ ನಾಲ್ಕು ಸಾವಿರ ಹಣವನ್ನು ದೋಚಿದ್ದಾರೆ. ಎರಡೂ ಕಡೆಯಲ್ಲೂ ಕಲ್ಲು ಹೊಡೆದ ಶಬ್ದಕ್ಕೆ ಮನೆಯವರು ಎದ್ದು ಬೊಬ್ಬೆ ಹಾಕಿದಾಗ ಕಳ್ಳರು ವಾಹನದಲ್ಲಿ ಪರಾರಿಯಾಗಿದ್ದಾರೆ.
ಇದಲ್ಲದೆ ಬಜಪೆ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಗುರುಪುರ ಆಣೆ ಬಳಿಯ ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಮೂಡುಬಿದಿರೆಗೆ ತೆರಳುತ್ತಿದ್ದ ವ್ಯಕ್ತಿಗಳನ್ನು ಇನ್ನೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅಡ್ಡಹಾಕಿ ದರೋಡೆ ನಡೆಸಿದೆ. ಈ ವೇಳೆ ಹಣ ಹಾಗೂ ಮೊಬೈಲ್ ನ್ನು ದೋಚಿದ್ದಾರೆ ಬೆಳ್ಳಂಬೆಳಗ್ಗೆ ನಡೆದ ಘಟನೆಯಾದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಿತ್ತು. ಈ ವೇಳೆ ದರೋಡೆ ಕೋರರು ವಾಹನದ ಗ್ಲಾಸ್ ಪುಡಿಗೈದಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಮೂಡುಬಿದಿರೆ ಪೆÇಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಉಪ ನಿರೀಕ್ಷಕ ಸುದೀಪ್, ಅಪರಾಧ ತಡೆ ವಿಭಾಗದ ಪೆÇಲೀಸರು ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
| |