ಸ್ವ-ಸಹಾಯ ಸಂಘದ ಮೂಲಕ ಮಹಿಳೆಯರ ಅಭಿವೃದ್ಧಿ ಸಾಧ್ಯ : ಹೇಮಂತ ಕುಮಾರ್
ಕೆಮ್ಮಣ್ಣು: ಆರ್ಥಿಕವಾಗಿ ಸಬಲರಾದರೇ ಮಹಿಳೆ ಸ್ವತಂತ್ರ ಸ್ವಾವಲಂಬಿ ಜೀವನ ನಡೆಸಬಹುದು. ಅದನ್ನು ಸಾಧಿಸಲು ಸ್ವಸಹಾಯ ಸಂಘಗಳು ಪೂರಕ ಸಹಕಾರ ನೀಡುತ್ತವೆ. ವೈಯುಕ್ತಿಕವಾಗಿ ಸಾಧನೆ ಮಾಡುವುದರ ಜೊತೆಗೆ ಸ್ವ ಸಹಾಯ ಸಂಘದ ಮೂಲಕ ಒಂದು ಯೋಜನೆಯನ್ನು ನಿಗದಿಪಡಿಸಿಕೊಂಡು ಸಾಧನೆಗೆ ಮುಂದಾದರೇ ಸರಕಾರದ ಬೆಂಬಲವೂ ದೊರಕಲಿದೆ.
ಈ ಬಗ್ಗೆ ಮಹಿಳೆಯರು ಹೆಚ್ಚಿನ ಗಮನ ಹರಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತೋನ್ಸೆ ಕೆಮ್ಮಣ್ಣು ಗ್ರಾ ಪಂ ನ ನೋಡಲ್ ಅಧಿಕಾರಿಯಾದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಹೇಮಂತ ಕುಮಾರ್ ಹೇಳಿದ್ದಾರೆ. ಅವರು ತೋನ್ಸೆ – ಕೆಮ್ಮಣ್ಣು ಗ್ರಾಮ ಪಂಚಾಯತಿನಲ್ಲಿ ಮಹಿಳಾ ಸ್ನೇಹಿ ಪಂಚಾಯತ್ ಅಭಿಯಾನಕ್ಕೆ ಪೂರಕವಾಗಿ ನಡೆದ 2020-21 ನೇ ಸಾಲಿನ ಮಹಿಳಾ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಮಾತನಾಡುತ್ತಿದ್ದರು.
ಅವಿಭಕ್ತ ಕುಟುಂಬ ನಶಿಸುತ್ತಿರುವ ಹಿನ್ನಲೆಯಲ್ಲಿ ಕೃಷಿ ನೆನೆಗುದಿಗೆ ಬೀಳುತ್ತಿದೆ. ಅದರ ಬದಲು ತೋಟಗಾರಿಕೆಯತ್ತ ಹೋಗಬಹುದಾಗಿದೆ. ಅದು ಆರಂಭದಲ್ಲಿ ಸ್ವಲ್ಪ ದುಸ್ತರವೆಂದು ಕಂಡು ಬಂದರೂ ಧೀರ್ಘಕಾಲದ ಪ್ರಯೋಜನ ನೀಡುವಂತಹದ್ದಾಗಿದೆ. ಅದೇ ರೀತಿ ಶ್ರೀಗಂಧ ಮತ್ತು ಬಿದಿರನ್ನು ಬೆಳೆಯುವ ಮೂಲಕ ಆರ್ಥಿಕವಾಗಿಯೂ ಸಬಲತೆ ಸಾಧ್ಯವಿದೆ. ತೋಟಗಾರಿಕಾ ಇಲಾಖೆಯಿಂದ ವಿವಿಧ ತೋಟಗಳನ್ನು ನಡೆಸಲು ಸಹಾಯಧನ ದೊರಕುತ್ತದೆ ಎನ್ನುವುದನ್ನು ಉದಾಹರಣೆ ಸಹಿತ ಅವರು ವಿವರಿಸಿದರು. ಈಗಾಗಲೇ ಮಹಿಳೆಯರಿಗೆ ಶೇ.33 ಮೀಸಲಾತಿಯನ್ನು ಎಲ್ಲಾ ರಂಗದಲ್ಲೂ ನೀಡಲಾಗುತ್ತಿದ್ದು, ಗ್ರಾ ಪಂ ಪ್ರಾತಿನಿಧ್ಯದಲ್ಲಿ ಶೇ.50 ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ಸಬಲರಾಗಬೇಕು ಎಂದು ಅವರು ಕರೆ ನೀಡಿದರು.
ಈ ಗ್ರಾಮಸಭೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ವಸತಿ ನಿರ್ಮಿಸಲು ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಯಿತು. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಪ್ರತಿನಿಧಿ ಶಾರದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಚಂದು, ಮಲ್ಪೆ ಠಾಣಾ ಎಸ್ಸೈ ಶ್ರೀ ತಿಮ್ಮೇಶ್, ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಶ್ರೀ ರಮೇಶ್ , ಗ್ರಾಮ ಲೆಕ್ಕಿಗ ಜಗದೀಶ್, ಅವರು ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಮಹಿಳಾ ಮತದಾರ ಗ್ರಾಮಸ್ಥರು ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಲತಾ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಸ್ವಾಗತಿಸಿದರು. ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ವಂದಿಸಿದರು. ಪಂಚಾಯತ್ ಕಾರ್ಯದರ್ಶಿ ದಿನಕರ ಅವರು ಪ್ರಸ್ತಾವಿಕ ಮಾತುಗಳ ಜೊತೆ ಕಾರ್ಯಕ್ರಮ ನಿರ್ವಹಿಸಿದರು.