‘ಸೆಕ್ಸ್ ಸಿಡಿ’ ಪ್ರಕರಣವನ್ನು ಡಿಕೆಶಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡರೇ?: ಕೂಲಂಕಷ ತನಿಖೆ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿಯವರ ಸೆಕ್ಸ್ ಸಿಡಿ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆಯೇ? ವಿವಾದವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ತನಿಖಾಧಿಕಾರಿಗಳು, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಸೆಕ್ಸ್ ಸಿಡಿ ನಾಲ್ಕು ತಿಂಗಳ ಹಿಂದೆಯೇ ಇದೆಯೆಂದು ಗೊತ್ತಾಗಿತ್ತೇ, ಆಗಿನಿಂದಲೇ ಸಿಡಿಯನ್ನಿಟ್ಟುಕೊಂಡು ಆಟವಾಡುತ್ತಿದ್ದರೇ ಎಂಬ ಅಂಶ ಇದೀಗ ಚರ್ಚೆಗೆ ಬರುತ್ತಿದೆ.
ವಿಡಿಯೊದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೇ ನಾಲ್ಕು ತಿಂಗಳ ಹಿಂದೆಯೇ ಸಿಡಿ ಇಟ್ಟುಕೊಂಡು ತಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಗೊತ್ತಾಗಿತ್ತು ಎಂದು ಹೇಳಲಾಗುತ್ತಿದೆ. ಸಿಡಿ ಗ್ಯಾಂಗ್ ನಾಲ್ಕು ತಿಂಗಳ ಹಿಂದೆಯೇ ರಮೇಶ್ ಜಾರಕಿಹೊಳಿಯವರನ್ನು ಸಂಪರ್ಕಿಸಿ ಅವರಿಗೆ ಬೆದರಿಕೆ ಹಾಕಿ ಹಣ ಕಿತ್ತುಕೊಳ್ಳಲು ಪ್ರಯತ್ನಿಸಿತ್ತೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಸೆಕ್ಸ್ ಸಿಡಿ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ತಿಳಿದಿದ್ದರೆ ಜಾರಕಿಹೊಳಿಯವರನ್ನು ರಾಜಕೀಯವಾಗಿ ಮುಗಿಸುವ ಉದ್ದೇಶಕ್ಕೆ ಮಾತ್ರ ಈ ಸೆಕ್ಸ್ ಸಿಡಿಯನ್ನು ಡಿ ಕೆ ಶಿವಕುಮಾರ್ ಅವರು ಬಳಸಿದ್ದರೇ ಎಂಬ ಪ್ರಶ್ನೆ ಕೂಡ ಉದ್ಭವವಾಗುತ್ತದೆ.
ಈ ಸೆಕ್ಸ್ ಸಿಡಿ ಹಿಂದಿನ ಕ್ರಿಮಿನಲ್ ಗ್ಯಾಂಗ್ ಬೇರೆ ರಾಜಕೀಯ ವ್ಯಕ್ತಿಗಳನ್ನು ಕೂಡ ಗುರಿಯಾಗಿಟ್ಟುಕೊಂಡು ಅವರನ್ನು ಬೆದರಿಸಿ ಹಣ ಸುಲಿಗೆ ಮಾಡುವ ಕುಕೃತ್ಯದಲ್ಲಿ ತೊಡಗಿತ್ತೇ ಎಂಬ ಸಂಶಯ ಕೂಡ ತನಿಖಾಧಿಕಾರಿಗಳಿಗೆ ಉದ್ಭವವಾಗಿದೆ. ಡಿ ಕೆ ಶಿವಕುಮಾರ್ ಅವರು ಈ ಗ್ಯಾಂಗ್ ನ ಭಾಗವಾಗಿರಲಿಕ್ಕಿಲ್ಲ, ಇದೊಂದು ವೃತ್ತಿಪರ ಗುಂಪಿನ ಕ್ರಿಮಿನಲ್ ಕೃತ್ಯವೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕನಾಗಿ, ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ತಪ್ಪುಗಳನ್ನು ಹೊರತರುವ ಜವಾಬ್ದಾರಿ ಡಿ ಕೆ ಶಿವಕುಮಾರ್ ಅವರಿಗೆ ಇರುವುದರಿಂದ ಸಿಡಿಯನ್ನು ತನ್ನ ರಾಜಕೀಯ ವಿರೋಧಿ ರಮೇಶ್ ಜಾರಕಿಹೊಳಿಯನ್ನು ಗುರಿಯಾಗಿಸಲು ಮಾತ್ರ ಡಿ ಕೆ ಶಿವಕುಮಾರ್ ಬಳಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿ ಕೆ ಶಿವಕುಮಾರ್, ರಾಜ್ಯ ಸರ್ಕಾರ ನಿರಂತರವಾಗಿ ರಮೇಶ್ ಜಾರಕಿಹೊಳಿಯನ್ನು ಬೆಂಬಲಿಸುತ್ತಾ ಬಂದಿದೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ, ಇದರಲ್ಲಿ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದು, ಸರ್ಕಾರ ಅವರಿಗೆ ಬೆಂಬಲ ನೀಡುತ್ತಾ ಬಂದಿದೆ. ಸರ್ಕಾರ ಅವರನ್ನು ಏಕೆ ರಕ್ಷಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ.
ಇನ್ನೊಂದೆಡೆ ಯುವತಿಯ ಪೋಷಕರು ಡಿ ಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಮುಂದಿಟ್ಟುಕೊಂಡು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಹಾಗಾದರೆ ತಮ್ಮ ಹೆಸರು ಹೇಳುವಂತೆ ಯುವತಿಯ ಪೋಷಕರ ಮೇಲೆ ಒತ್ತಡ ಹೇರಿರಬಹುದೇ ಎಂದು ಕೇಳಿದಾಗ ಡಿ ಕೆ ಶಿವಕುಮಾರ್, ಅವರ ಅನುಕೂಲಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಲಿ, ತನಿಖೆ ನಡೆಯುತ್ತಿದೆ, ಹೀಗಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.