ಕೊರೊನಾ ಹೆಚ್ಚಳ ಕಟ್ಟುನಿಟ್ಟಿನ ಕ್ರಮ:ರ್ಯಾಲಿ, ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ- ಮೇಳ, ಧಾರ್ಮಿಕ ಕಾರ್ಯಕ್ರಮಕ್ಕೆ ಬ್ರೇಕ್!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರತಿಭಟನೆ, ರ್ಯಾಲಿ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋವಿಡ್ 19 ಪ್ರಕರಣ ಹೆಚ್ಚಳದ ಬಗ್ಗೆ ಎರಡು ಗಂಟೆಗಳ ಕಾಲ ತಜ್ಞರು, ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ 15 ದಿನಗಳ ಕಾಲ ರ್ಯಾಲಿ, ಪ್ರತಿಭಟನೆ, ಚಳುವಳಿಗಳಿಗೆ ನಿಷೇಧ ಹೇರಲಾಗಿದೆ. ಮೇಳ, ಧಾರ್ಮಿಕ ಕಾರ್ಯಕ್ರಮ, ಅಪಾರ್ಟ್ಮೆಂಟ್ನ ಕಾಮನ್ ಏರಿಯಾ ಚಟುವಟಿಕೆಯನ್ನು ಸಹ ನಿಷೇಧಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಲಾಗಿದ್ದು, ಕ್ಲಬ್ ಗಳಲ್ಲಿ ಹಲವು ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ರೀತಿಯ ಲಾಕ್ಡೌನ್, ನೈಟ್ ಕರ್ಫ್ಯೂ ವಿಧಿಸುವುದಿಲ್ಲ. ನಾಳೆಯಿಂದ ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ, ತೆರೆದಿರುತ್ತವೆ. ಆದರೆ 1 ರಿಂದ 9ನೇ ತರಗತಿವರೆಗೆ ಕಡ್ಡಾಯವಾಗಿ ಪಾಸ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
ಕೋವಿಡ್ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ನಗರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಸರ್ಕಾರ, ಬಿಬಿಎಂಪಿ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈಗಾಗಲೇ ಹೆಚ್.ಎ.ಎಲ್. ಮತ್ತು ಹಜ್ ಭವನಗಳಲ್ಲಿ ತಲಾ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸಹ 250 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಏಪ್ರಿಲ್ 5ರಿಂದ ಆರಂಭವಾಗಲಿದೆ. ಸ್ಲಂಗಳಲ್ಲಿ ಕೋವಿಡ್ ಸಂಖ್ಯೆ ವಿರಳವಾಗಿರುವುದು ಸಮಾಧಾನದ ಸಂಗತಿಯಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ಕಡ್ಡಾಯ. ಪ್ರಯಾಣಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಿದೆ. ಸಾರ್ವಜನಿಕರು ಜಾಗೃತರಾಗಿ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ.
ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ತಡೆಗಟ್ಟಿ. ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಎಲ್ಲ ಅರ್ಹ ನಾಗರಿಕರೂ ಲಸಿಕೆ ಹಾಕಿಸಿಕೊಳ್ಳಬೇಕು. ಆ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೈ ಜೋಡಿಸುವಂತೆ ಕಳಕಳಿಯ ಮನವಿ ಮಾಡುತ್ತೇನೆ. ಶಿಕ್ಷಕರಿಗೂ ಕೋವಿಡ್ ಲಸಿಕೆ ಹಾಕಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಶಾಲಾ–ಕಾಲೇಜುಗಳಿಗೆ ರಜೆ ಇಲ್ಲ, ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ .