ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಕೋರ್ಟ್ ಅನುಮತಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಲು 24 ಎಸಿಎಂಎಂ ಕೋರ್ಟ್ ಅನುಮತಿ ನೀಡಿದೆ.
ಯುವತಿ ಹಾಜರಾಗಲು ಕೋರ್ಟ್ ಅನುಮತಿ ನೀಡುತ್ತಿದ್ದಂತೆ ಯುವತಿ ಪರ ವಕೀಲ ಜಗದೀಶ್ ಕುಮಾರ್ ಅವರು ಎಸಿಎಂಎಂ ಕೋರ್ಟ್ ನತ್ತ ತೆರಳುತ್ತಿದ್ದು, ಸಂತ್ರಸ್ತ ಯುವತಿ ಸಹ ಯಾವುದೇ ಕ್ಷಣದಲ್ಲಿ ಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.
ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸಹ ಯುವತಿ ಭದ್ರತೆಗಾಗಿ ಓರ್ವ ಮಹಿಳಾ ಪಿಎಸ್ಐ ಸೇರಿದಂತೆ ಒಟ್ಟು 8 ಮಹಿಳಾ ಪೊಲೀಸ್ ಸಿಬ್ಬಂದಿಯ ತಂಡ ರಚಿಸಿದ್ದು, ಯುವತಿ ಹೇಳಿದ್ದಲ್ಲಿಗೆ ತೆರಳಿ ಭದ್ರತೆ ನೀಡಲು ಮುಂದಾಗಿದೆ.
ಇನ್ನು ಬೆಳಗ್ಗೆಷ್ಟೇ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರ ವೈರಲ್ ಆಗಿತ್ತು. ಪತ್ರದಲ್ಲಿ ಮಾಜಿ ಸಚಿವರಿಂದ ತಮಗೆ ಜೀವ ಬೆದರಿಕೆ ಇದ್ದು, ತನಗೆ ಸೂಕ್ತ ರಕ್ಷಣೆ ಒದಗಿಸಲು ಮತ್ತು ನ್ಯಾಯ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.
ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕೇಸ್ ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಎಂದು ಯುವತಿ ಇಮೇಲ್ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು.