ಜೆಇಇ, ನೀಟ್, ಸಿಇಟಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಎದುರಿಸಲು ಗೆಟ್ಮೈಕ್ಲಾಸ್ ಪ್ರಾರಂಭ
ಮಣಿಪಾಲ: ಮಣಿಪಾಲ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್ (ಎಂಟಿಎಲ್) ಜೆಇಇ, ನೀಟ್, ಮತ್ತು ಸಿಇಟಿಯಂಥ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಆನ್ಲೈನ್ ಪರೀಕ್ಷೆಯ ಸಿದ್ಧತೆಗಾಗಿ ಗೆಟ್ಮೈಕ್ಲಾಸ್ (GetMiClass) ಫ್ಲ್ಯಾಟ್ಫಾರ್ಮ್ ಅನ್ನು ಪರಿಚಯಿಸಿದೆ ಎಂದು ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ನ ಡಿಜಿಟಲ್ ಸೊಲ್ಯೂಶನ್ಸ್ ಉಪಾಧ್ಯಕ್ಷರಾದ ಗುರುಪ್ರಸಾದ್ ಕಾಮತ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಮಾಹಿತಿ ನೀಡಿರುವ ಅವರು, ಗೆಟ್ಮೈಕ್ಲಾಸ್ ಫ್ಲ್ಯಾಟ್ಫಾರ್ಮ್ ಗೆ ವಿದ್ಯಾರ್ಥಿಗಳು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅಲ್ಲದೆ ವಿದ್ಯಾರ್ಥಿಗಳು ಸಿಇಟಿ, ಜೆಇಇ ಅಥವಾ ನೀಟ್ ಪರೀಕ್ಷೆಯ ಪ್ರಶ್ನೆಗಳಿಗೆ ಸ್ವಯಂಪ್ರೇರಿತರಾಗಿ ಉತ್ತರಿಸಿ ಸ್ಥಳದಲ್ಲಿಯೇ ಫಲಿತಾಂಶವನ್ನು ಪಡೆದುಕೊಂಡು ಸ್ವಯಂಪ್ರೇರಿತರಾಗಿ ಮೌಲ್ಯಮಾಪನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ಈ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.
ಪ್ರಸಕ್ತ ವರ್ಷದ ಪಠ್ಯದ ಪ್ರಶ್ನೆಗಳಲ್ಲದೆ ಈ ಹಿಂದಿನ ವರ್ಷಗಳ ಸಿಇಟಿ, ಜೆಇಇ ಮತ್ತು ನೀಟ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಆಯ್ದ 2,000ಕ್ಕೂ ಅಧಿಕ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರಗಳ ವೀಡಿಯೋಗಳನ್ನು ಈ ಫ್ಲ್ಯಾಟ್ಫಾರ್ಮ್ ಒಳಗೊಂಡಿದೆ. ಅಷ್ಟು ಮಾತ್ರವಲ್ಲದೆ ಈ ವೀಡಿಯೋಗಳಲ್ಲಿ ಪ್ರಶ್ನೆಗಳಿಗೆ ತ್ವರಿತವಾಗಿ ಹೇಗೆ ಉತ್ತರಿಸಬಹುದು ಎಂಬ ಬಗೆಗೆ ತಜ್ಞ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕೆಲವೊಂದು ಕಿವಿಮಾತುಗಳು ಮತ್ತು ಸಲಹೆಗಳನ್ನೂ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಮಾತು ಮುಂದುವರೆಸಿದ ಅವರು, ವಿದ್ಯಾರ್ಥಿಗಳು GetMiClass ಫ್ಲ್ಯಾಟ್ಫಾರ್ಮ್ ನ್ನು ಇಂಟರ್ನೆಟ್ ಸಂಪರ್ಕ ಹೊಂದಿರುವ ಯಾವುದೇ ಡೆಸ್ಕ್ ಟಾಪ್ ಅಥವಾ ಮೊಬೈಲ್ ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಸಿಇಟಿ ಚಂದಾ ಮೂರು ತಿಂಗಳುಗಳಿಗೆ 399 ರೂ.ಗಳಾಗಿದ್ದರೆ ಜೆಇಇ ಮತ್ತು ನೀಟ್ ಚಂದಾವು ಮೂರು ತಿಂಗಳುಗಳಿಗೆ 799ರೂ. ಗಳಾಗಿವೆ. ವಿದ್ಯಾರ್ಥಿಗಳು ಮಾ. 31 ರೊಳಗಾಗಿ ಸಿಇಟಿ ಕೋರ್ಸ್ ಕೋಚಿಂಗ್ಗೆ ಉಚಿತವಾಗಿ ನೋಂದಾಯಿಸಿಕೊಳ್ಳುವ ಅವಕಾಶವಿದ್ದು ಇದು 700ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿರುತ್ತದೆ.
“ಈ ಫ್ಲ್ಯಾಟ್ ಫಾರ್ಮ್ ನಲ್ಲಿ 200 ತಾಸುಗಳಿಗೂ ಅಧಿಕ ಸಮಯದ ವಿಷಯ ಸಂಗ್ರಹವಿದ್ದು ಇದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಬಹಳಷ್ಟು ಸಹಕಾರಿಯಾಗಲಿದೆ. ಈ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಫ್ಲ್ಯಾಟ್ ಫಾರ್ಮ್ ಸರಳವಾದ ಮಾರ್ಗೋಪಾಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕೈಗೆಟಕುವ ಬೆಲೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಗುಣಮಟ್ಟದ ಕೋಚಿಂಗ್ ಲಭ್ಯವಾಗುವುದನ್ನು ಈ ಫ್ಲ್ಯಾಟ್ಫಾರ್ಮ್ ಖಾತರಿಪಡಿಸುತ್ತದೆ ಎಂದು ತಿಳಿಸಿದರು.