ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದೆಯೇ ನಿಮಗೆ ಕಾದಿದೆ ಶಾಕ್!
ಉಡುಪಿ: ಇಂದು ನಾವು ಮಾಡುವ ಉಳಿತಾಯ ಮುಂದೊಂದು ದಿನ ನಮ್ಮ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೆ ಬ್ಯಾಂಕ್‍ನಲ್ಲಿ ಖಾತೆ ತೆರೆಯುತ್ತೇವೆ ಇನ್ನು ಕೆಲವರು ಇದೇ ಉದ್ದೇಶದಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿರುತ್ತಾರೆ. ಈ ರೀತಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವವರು ತಾವು ಹೊಂದಿರುವ ನಿರ್ಧಿಷ್ಟ ಖಾತೆಗಳಲ್ಲಿ ನಿರಂತರ ವ್ಯವಹಾರ ನಡೆಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅನೇಕರು ತಾವು ಹೊಂದಿದ ಬ್ಯಾಂಕ್ ಖಾತೆಯಲ್ಲಿ ಯವುದಾದರೂ ಒಂದರಲ್ಲಿ ಮಾತ್ರ ವಹಿವಾಟು ನಡೆಸುತ್ತಾರೆ. ಒಂದು ವೇಳೆ ನೀವು ಕೂಡಾ ಅನೇಕ ಬ್ಯಾಂಕ್ ಖಾತೆ ಹೊಂದಿದ್ದು, ಅದು ವಹಿವಾಟು ಇಲ್ಲದೆ ನಿಷ್ಕ್ರಿಯ ಗೊಂಡಿದ್ದರೆ ಅದನ್ನು ಕ್ಲೋಸ್ ಮಾಡುವುದು ಉತ್ತಮ. ಒಂದು ವೇಳೆ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆ ಕ್ಲೋಸ್ ಮಾಡದೇ ಇದ್ದಲ್ಲಿ ಅದು ಹೊರೆಯಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಬ್ಯಾಂಕುಗಳು, ಗ್ರಾಹಕರು ತಮ್ಮ ಖಾತೆಯಲ್ಲಿ ಇಂತಿಷ್ಟು ಹಣವನ್ನು ಇರಿಸಬೇಕೆಂಬ(ಮಿನಿಮಂ ಬ್ಯಾಲೆನ್ಸ್) ನಿಯಮವನ್ನು ಜಾರಿಗೆ ತಂದಿದ್ದು, ಒಂದು ವೇಳೆ ಅಷ್ಟು ಹಣ ನಿಮ್ಮ ಖಾತೆಯಲ್ಲಿರದಿದ್ದರೆ ಅದಕ್ಕೆ ದಂಡ ವಿಧಿಸುತ್ತ ಹೋಗಲಾಗುತ್ತದೆ. ವಿಳಂಬ ಮಾಡಿ ನೀವು ಇಂತಹ ಖಾತೆಯನ್ನು ಕ್ಲೋಸ್ ಮಾಡಲು ಹೋದರೆ ಭಾರೀ ದಂಡವನ್ನು ತೆರಬೇಕಾದ ಪರಿಸ್ಥಿತಿ ಬರಬಹುದು. ಅಲ್ಲದೆ ಈಗ ಪ್ರತಿಯೊಂದು ಖಾತೆಯೂ ಆಧಾರ್ ಜೊತೆ ಲಿಂಕ್ ಆಗಿರುವುದರಿಂದ ಆದಾಯ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಗ್ರಾಹಕರು ತಾವು ಹೊಂದಿದ್ದ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿ ನೀಡಬೇಕಾಗುತ್ತದೆ. ವಹಿವಾಟು ನಡೆಸುತ್ತಿಲ್ಲವೆಂದು ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ವಹಿವಾಟು ನಡೆಸದ ಖಾತೆಗಳನ್ನು ಬಂದ್ ಮಾಡುವುದು ಸೂಕ್ತ ಎಂದು ವರದಿಯೊಂದು ಹೇಳಿದೆ.