ಅತ್ಯಾಚಾರಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿದ್ದು ಸರ್ಕಾರದ ನೀಚತನವೋ ಅಥವಾ ಪೊಲೀಸರ ಹೇಡಿತನವೋ: ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್–ಬಿಜೆಪಿ ಟ್ವೀಟ್ ಸಮರವೂ ಜೋರಾಗಿದೆ.
ಭಾನುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಮೇಶ್ ಜಾರಕಿಹೊಳಿಯ ಚಡ್ಡಿಯ ಲಾಡಿಯೂ ಸಡಿಲ, ನಾಲಿಗೆಯೂ ಸಡಿಲ, ಬುದ್ಧಿಯೂ ಸಡಿಲ ಎನ್ನುವುದನ್ನು ಜಗತ್ತು ನೋಡಿದೆ. ರಾಜ್ಯದ ಮರ್ಯಾದೆ ದಿನದಿನಕ್ಕೂ ಕುಸಿಯುತ್ತಿದೆ. ಹೀಗಿದ್ದರೂ ಅತ್ಯಾಚಾರಿ ಆರೋಪಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿದ್ದು ಸರ್ಕಾರದ ನೀಚತನವೋ ಅಥವಾ ಪೊಲೀಸರ ಹೇಡಿತನವೋ ಗೃಹ ಸಚಿವ ಬಸವರಾಜ ಬೊಮ್ಮಯಿ ಅವರೇ?’ ಎಂದು ಪ್ರಶ್ನಿಸಿದೆ.
‘ಹಿಂದೆಲ್ಲ ಆರೋಪಿಗಳನ್ನು ಹಿಡಿಯಲು ಪೊಲೀಸರ ತಂಡ ರಚನೆಯಾಗುತ್ತಿತ್ತು. ಆದರೆ, ಅತ್ಯಾಚಾರ ಆರೋಪಿಯ ರಕ್ಷಣೆಗಾಗಿಯೇ ಎಸ್ಐಟಿ ಎನ್ನುವ ಪೊಲೀಸರ ತಂಡ ಸೃಷ್ಟಿಯಾಗಿದ್ದು, ಈ ದೇಶದ ಇತಿಹಾಸದಲ್ಲಿ ಇದೇ ಮೊದಲೇನೋ! ಬಿಜೆಪಿ ಆಡಳಿತದಲ್ಲಿ ಅತ್ಯಾಚಾರಿಯೊಬ್ಬನನ್ನು ರಕ್ಷಣೆ ಮಾಡುವ ಕಳಂಕ ಕರ್ನಾಟಕಕ್ಕೆ ಅಂಟಿಕೊಂಡಿದೆ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಬೆಳಗಾವಿಯಲ್ಲಿ ಪ್ರತಿಭಟನೆಯಂತೆ! ಕಂಡವರ ಮನೆಯ ಹೆಣ್ಣು ಮಕ್ಕಳನ್ನು ಮಂಚ ಹತ್ತಿಸಿಕೊಂಡಿದ್ದಕ್ಕಾ? ಅತ್ಯಾಚಾರ ಆರೋಪಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿರುವ ಸರ್ಕಾರದ ವಿರುದ್ಧವಾ? ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿದ ಅತ್ಯಾಚಾರಿ ವಿರುದ್ಧವಾ? ದೇಶದೆದುರು ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿರುವ ಬಿಜೆಪಿ ವಿರುದ್ಧವಾ?’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
‘ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯ, ಪೊಲೀಸರ ಕಳಪೆ ಕಾರ್ಯಕ್ಷಮತೆ ಈ ಸಿಡಿ ಪ್ರಕರಣದಲ್ಲಿ ಬಯಲಾಗಿದೆ. ದೂರು ದಾಖಲಾಗಿದ್ದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದೆ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಶೋಷಣೆಗೆ ಒಳಪಟ್ಟ ಸಾಮಾನ್ಯ ಹೆಣ್ಣು ಮಗಳನ್ನು ಪತ್ತೆಹಚ್ಚಿ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದೆ.
‘ಸರ್ಕಾರಕ್ಕೆ ಬೆದರಿಕೆ ಹಾಕಿ, ಪುಂಡ ಪೋಕರಿಗಳಿಗೆ ಹಣ ಕೊಟ್ಟು ದಾಂಧಲೆ ಎಬ್ಬಿಸಿದಾಕ್ಷಣ ಅತ್ಯಾಚಾರಿ ಸದಾಚಾರಿಯಾಗಿ ಬದಲಾಗುವುದಿಲ್ಲ ರಮೇಶ್ ಜಾರಕಿಹೊಳಿಯವರೇ., ಬಸವರಾಜ ಬೊಮ್ಮಯಿ –ಯಡಿಯೂರಪ್ಪ ಅವರೇ ಆರೋಪಿಯನ್ನು ಬಂಧಿಸದೇ ಕಲ್ಲೆಸೆದು, ದಾಂಧಲೆ ಎಬ್ಬಿಸುವ ಭಯೋತ್ಪಾದಕ ಕೃತ್ಯವೆಸಗಲು ಕಳಿಸಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ವರ್ತಿಸುತ್ತಿದೆ ರಮೇಶ್ ಜಾರಕಿಹೊಳಿಯ ಗೂಂಡಾಪಡೆ. ಬೊಮ್ಮಯಿ ಅವರೇ ನೀವು ಅತ್ಯಾಚಾರಿಯ ಈ ನಾಟಕ ನೋಡಿ ಮಜಾ ಅನುಭವಿಸುತ್ತಾ ಕುಳಿತಿದ್ದೀರಾ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.