ಅವರದ್ದೇ ಸರ್ಕಾರವಿದೆ, ಕೇಸು ಹಾಕಲಿ ಏನು ಬೇಕಾದರೂ ಮಾಡಿಕೊಳ್ಳಲಿ,ಜಾರಕಿಹೊಳಿ ಕನಕಪುರಕ್ಕೆ ಬಂದರೆ ಸಂತೋಷ: ಡಿಕೆಶಿ

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕನಕಪುರಕ್ಕೆ ಬರುವುದಾದರೆ ಬರಲಿ, ಅವರಿಗೆ ಒಳ್ಳೆಯದಾಗಲಿ, ಬಹಳ ಸಂತೋಷದಿಂದ ಅವರನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸೆಕ್ಸ್ ಸಿಡಿ ಪ್ರಕರಣ ವಿಚಾರದಲ್ಲಿ ಮಹಾನಾಯಕ ಯಾರು ಎಂದು ನೇರವಾಗಿ ಡಿ ಕೆ ಶಿವಕುಮಾರ್ ಹೆಸರನ್ನು ಅವರು ಪ್ರಸ್ತಾಪ ಮಾಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಡಿ ಕೆ ಶಿವಕುಮಾರ್ ಅವರಲ್ಲಿ ಪ್ರತಿಕ್ರಿಯೆ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನನ್ನ ಹೆಸರು ಪ್ರಸ್ತಾಪ ಮಾಡಲಿ ಬಿಡಿ, ಅದು ಅವರ ಅಭಿಪ್ರಾಯ, ರಮೇಶ್ ಜಾರಕಿಹೊಳಿ ಹೇಳಲಿ, ಯುವತಿಯ ಪೋಷಕರೇ ಹೇಳಲಿ, ಇನ್ನೊಬ್ಬರಾದರೂ ಇರಲಿ,ಯಾರು ಏನು ಬೇಕಾದರೂ ಹೇಳಬಹುದು, ಅದಕ್ಕೆಲ್ಲಾ ಪುರಾವೆಗಳು ಬೇಕು, ಕಾನೂನು ಇದೆ, ತನಿಖೆ ಮಾಡಲು ಎಸ್ ಐಟಿ ಇದೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

ಯುವತಿ ನನ್ನ ಬಳಿ ಬರಲೂ ಇಲ್ಲ, ಭೇಟಿ ಮಾಡಲೂ ಇಲ್ಲ, ರಾಜಕೀಯ ಪಕ್ಷದ ನಾಯಕನಾಗಿ ಆಕೆಗೆ ಮತ್ತು ಆಕೆಯ ಪೋಷಕರಿಗೆ ಸಹಾಯ ಮಾಡಿ, ರಕ್ಷಣೆ ಕೊಡಿ ಎಂದು ಸರ್ಕಾರವನ್ನು ಕೇಳಿಕೊಂಡೆ. ಇವೆಲ್ಲಾ ವೈಯಕ್ತಿಕ ವಿಚಾರಗಳು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕಾರಣ ಮಾಡುವ ವಿಚಾರದಲ್ಲಿ ಮಾತ್ರ ರಾಜಕಾರಣ ಮಾಡುತ್ತೇವೆ ಅಷ್ಟೆ ಎಂದರು.

ರಮೇಶ್ ಜಾರಕಿಹೊಳಿಯವರು ಮಹಾನಾಯಕ ಎಂದು ಕರೆಯುತ್ತಾರೋ, ಶೋಮ್ಯಾನ್ ಎಂದು ಕರೆಯುತ್ತಾರೋ ಅಥವಾ ಅವಾಚ್ಯವಾಗಿ ಕರೆಯುತ್ತಾರೋ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಏನು ಬೇಕಾದರೂ ಹೇಳಿಕೊಳ್ಳಲು, ಅವರದ್ದೇ ಸರ್ಕಾರವಿದೆ, ಕೇಸು ಹಾಕಲಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.

Leave a Reply

Your email address will not be published. Required fields are marked *

error: Content is protected !!