ರಮೇಶ್ ಜಾರಕಿಹೊಳಿ ದೃಶ್ಯವಷ್ಟೇ ಅಲ್ಲ, ಮಾತೂ ಅಶ್ಲೀಲ- ಕಾಂಗ್ರೆಸ್ ಟ್ವೀಟ್: ಆತ ಹತಾಶೆಯಲ್ಲಿದ್ದಾರೆ- ಡಿಕೆಶಿ ಹೇಳಿಕೆ
ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದ ಯುವತಿಯ ಪೋಷಕರು, ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ, ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ ಎಂದು ಕಿಡಿಕಾರಿದೆ.
ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ದೊಡ್ಡ ದೊಡ್ಡ ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ, ಅವರೇ, ಕೇಸ್ ದಾಖಲಾಗಿದ್ದರೂ ಬಂಧಿಸದೇ ಇಂತ ಕೀಳು ನಾಟಕ ಆಡಲು ಬಿಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದು, ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲಿಗೆ ಆರೋಪಿಗೆ ನೂರಾರು ಪೊಲೀಸರ ನಿಯೋಜಿಸಿ ಬಿಗಿ ಭದ್ರತೆ ನೀಡಲಾಗುತ್ತಿದೆ. ಪೊಲೀಸರನ್ನು ಕಳಿಸಬೇಕಿದ್ದಿದ್ದು ಅರೆಸ್ಟ್ ಮಾಡುವುದಕ್ಕೋ ಅಥವಾ ರಕ್ಷಣೆ ಮಾಡುವುದಕ್ಕೋ ಎಂದು ಗೃಹ ಸಚಿವರನ್ನು ಕೇಳಲಾಗಿದೆ.
ಇದೇ ಉತ್ತರ ಪ್ರದೇಶ ಮಾಡೆಲ್” ಅಲ್ಲವೇ? ಈ ನವರಂಗಿ ಆಟಗಳನ್ನು ಬಿಟ್ಟು ಕೂಡಲೇ ಆರೋಪಿಯನ್ನು ಬಂಧಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಮಧ್ಯೆ ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬೇಕು. ಅವರ ಮಾತನಾಡಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಕಾನೂನು ಇದೆ. ಅಧಿಕಾರಿಗಳು ಇದ್ದಾರೆ. ತನಿಖೆಯೂ ನಡೆಯುತ್ತಿದೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಡಿಕೆ ಶಿವಕುಮಾರ್ ಹೆಣ್ಣು ಮಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ ಎಂಬ ಯುವತಿಯ ಪೋಷಕರ ಆರೋಪಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನಗೆ ಅದರ ಅವಶ್ಯಕತೆ ಇಲ್ಲ. ನಾನು ಆ ಯುವತಿಯನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ಬೆಳಗ್ಗೆಯೇ ಹೇಳಿರುವುದಾಗಿ ತಿಳಿಸಿದರು.